ಕಲಬುರ್ಗಿ ಕೆಸಿಟಿ ಫಾರ್ಮಸಿ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರದೇಶ.

 

ಕಲಬುರ್ಗಿ, ಮೇ.೧೨- ನಗರದ ಪ್ರತಿಷ್ಠಿತ ಕೆಸಿಟಿ ಫಾರ್ಮಸಿ ಕಾಲೇಜಿನಲ್ಲಿ ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಪ್ರಾಚಾರ್ಯ ಡಾ. ಮೊಹ್ಮದ್ ಯೂನಸ್ ಅಲಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜರತ್ ಶೇಖ್ ಮಿನ್ಹಾಜುದ್ದೀನ್ ಕುಲ್ಲಿ ರವಾನ್ ಚಾರಿಟೇಬಲ್ ಟ್ರಸ್ಟ್ ಮತ್ತು ಖಮರುಲ್ ಇಸ್ಲಾಂ ಫೌಂಡೇಶನ್ ಸಹಯೋಗದೊಂದಿಗೆ ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ಈ ವರ್ಷ ದ್ವಿತೀಯ ಪಿಯುಸಿ (೧೨ನೇ ತರಗತಿ) ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಡಿ.ಫಾರ್ಮ (೨ ವರ್ಷದ ಡಿಪ್ಲೋಮಾ) ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಗೆ, ಬಿ.ಫಾರ್ಮ (೪ ವರ್ಷದ ಪದವಿ) ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುವುದು ಎಂದು ಅವರು ಘೋಷಿಸಿದರು.

ಅಭ್ಯರ್ಥಿಗಳು ಕೇವಲ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಪಿಯುಸಿ (ಪಿಸಿಎಂಬಿ) ವಿಷಯಗಳಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಅಧಿಕೃತ ವೆಬ್‌ಸೈಟ್ ಮೂಲಕ ಮೇ ೧೫ರೊಳಗೆ ಸಲ್ಲಿಸಬಹುದು. ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರತಿಯನ್ನು ಮತ್ತು ಅಗತ್ಯ ದಾಖಲೆಗಳನ್ನು ಕೆ.ಸಿ.ಟಿ ಫಾರ್ಮಸಿ ಕಾಲೇಜಿನಲ್ಲಿ ಭೌತಿಕವಾಗಿ (ಆಫ್‌ಲೈನ್‌ನಲ್ಲಿ) ಸಲ್ಲಿಸಬೇPಕು ಎಂದು ಅವರು ಹೇಳಿದರು.

ಖಮರುಲ್ ಇಸ್ಲಾಂ ಫೌಂಡೇಶನ್ ಅಧ್ಯಕ್ಷ ಫರಾಜ್ ಉಲ್ ಇಸ್ಲಾಂ ಅವರು ಆನ್‌ಲೈನ್ ಅರ್ಜಿಗೆ ಚಾಲನೆ ನೀಡಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ಫಾರ್ಮಸಿ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದು ಒಂದು ಸುವರ್ಣ ಅವಕಾಶ ಎಂದು ತಿಳಿಸಿದ್ದಾರೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಅನಂತರಾವ್ ಕುಲಕರ್ಣಿ, ಸಿದ್ದಿಕಿ ಶಕೀಲ್ ಅಹ್ಮದ್, ಅಂಬ್ರಿನ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment