ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ಕಕ್ಕಳಮೇಲಿ ಗ್ರಾಮದಲ್ಲಿ ದಿವ್ಯ ಭಕ್ತಿಭಾವದ ವಾತಾವರಣದಲ್ಲಿ ಶ್ರೀ ಸಿದ್ದಲಿಂಗ ಮಹಾರಾಜರ ಜನ್ಮಸ್ಥಳದಲ್ಲಿ ನಡೆದ ಶ್ರೀ ಶ್ರೀ ಶ್ರೀ ಶಂಕರಲಿಂಗ ಮಹಾರಾಜರ 103ನೇ ಜಾತ್ರೋತ್ಸವವು ಭವ್ಯವಾಗಿ ಮತ್ತು ವೈಭವೋಪೇತವಾಗಿ ನೆರವೇರಿತು.
ಈ ಜಾತ್ರೋತ್ಸವದ ಅಂಗವಾಗಿ ಶ್ರೀ ಸಿದ್ದಲಿಂಗ ಮಹಾರಾಜರ ಮಹಾರಥೋತ್ಸವವು ವಿಶೇಷ ಆಕರ್ಷಣೆಯಾಗಿತ್ತು. 20 ದಿನಗಳ ಕಾಲ ನಿರಂತರವಾಗಿ ನಡೆದ ಶ್ರೀ ಅಮೋಘಸಿದ್ಧೇಶ್ವರ ಮಹಾಪುರಾಣ ಕಾರ್ಯಕ್ರಮ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸಿತು. ಪುರಾಣಿಕರಾಗಿ ಶ್ರೀ ಅಭಿನವ ಮದಗೊಂಡೇಶ್ವರ ಸಂಗೋಗಿ ಮಹಾರಾಜರು ಪುರಾಣವನ್ನು ಭಕ್ತಿಪೂರ್ಣವಾಗಿ ನಿರೂಪಿಸಿದರು.
ದಿನಾಂಕ 22/03/2026 ರಂದು ಶ್ರೀ ಸಿದ್ದಲಿಂಗ ಮಹಾರಾಜರ ಕೃತು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅದೇ ದಿನ ಮಧ್ಯರಾತ್ರಿ 12 ಗಂಟೆಗೆ ಅಗ್ನಿ ಸ್ಪರ್ಶ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ನಂತರ 23/03/2026 ರಂದು ಶ್ರೀ ಶ್ರೀ ಶ್ರೀ ಶಂಕರಲಿಂಗ ಹಾಗೂ ಶ್ರೀ ಸಿದ್ದಲಿಂಗ ಮಹಾರಾಜರ ಗದ್ದುಗೆಗಳಿಗೆ ಮಹಾಪೂಜೆ ಸಲ್ಲಿಸಿ, ಶ್ರೀ ಮಠದಿಂದ ಪಲ್ಲಕ್ಕಿ ಮೆರವಣಿಗೆ ಡೋಳು, ಹಲಿಗೆ ಮೇಳ ಹಾಗೂ ಕೊಂಭು ನಾದಗಳೊಂದಿಗೆ ಸಂಭ್ರಮದಿಂದ ಸಾಗಿತು. ಮಧ್ಯಾಹ್ನ 12 ಗಂಟೆಗೆ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಿತು.
ಸಂಜೆ 5 ಗಂಟೆಗೆ ಕುಂಭ, ಕಳಶ, ಬಾಜಾ-ಬಜಂತ್ರಿ ಹಾಗೂ ಡೋಳುಗಳೊಂದಿಗೆ ಭವ್ಯ ಮೆರವಣಿಗೆ ಶ್ರೀ ಮಠದಿಂದ ಆರಂಭವಾಗಿ, ಶ್ರೀ ಶಂಕರಲಿಂಗ ಮಹಾರಾಜರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಮಹಾರಥದ ಬಳಿಗೆ ತಲುಪಿತು. ಮಹಾರಥಕ್ಕೆ ಮಂಗಳಾರತಿ ಸಲ್ಲಿಸಿ ಕಳಶಾರೋಹಣ ಮಾಡಿದ ಬಳಿಕ, ಶ್ರೀ ಮಠದ ಪೀಠಾಧಿಪತಿ ಡಾ. ಮುರಗರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಅದೇ ದಿನ ರಾತ್ರಿ ಶ್ರೀ ಅಮೋಘ ಸಿದ್ಧ ಪವಾಡ ಪೌರಾಣಿಕ ನಾಟಕವು ಭಕ್ತರ ಮನಸೂರೆಗೊಂಡಿತು. ಜಾತ್ರೆಗೆ ಆಗಮಿಸಿದ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಪುರಾಣ ಕಾರ್ಯಕ್ರಮದ 20 ದಿನಗಳ ಅವಧಿಯಲ್ಲಿಯೂ ಮಹಾಪ್ರಸಾದವನ್ನು ವಿತರಿಸಲಾಯಿತು.
ಒಟ್ಟಾರೆ, ಕಕ್ಕಳಮೇಲಿ ಗ್ರಾಮದ ಈ ಜಾತ್ರೋತ್ಸವವು ಭಕ್ತಿ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವದ ಸಂಕೇತವಾಗಿ ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.