ಕಲಬುರಗಿ: ಕಲಬುರಗಿ ಮಾರುಕಟ್ಟೆಯಲ್ಲಿ ಮಾವಿನ ಘಮಲು ಹರಡಿದೆ. ಆಲ್ಫಾನ್ಫೋ(ಆಪೂಸ್), ಬೆನಿಶಾನ್ (ಬಂಗನಪಲ್ಲಿ), ದಶೇರಿ, ಕೇಸರ್, ತೋತಾಪುರಿ, ಮಲೈಕಾ, ಮಲಗೋವಾ, ಸ್ಥಳೀಯ ‘ಜವಾರಿ’ ತಳಿಯ ಹಣ್ಣುಗಳು ಕಲಬುರಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ತಾಜ್ ಸುಲ್ತಾನ್‌ಪುರ, ಸೂಪರ್ ಮಾರ್ಕೆಟ್, ಕಣ್ಣಿ ಮಾರುಕಟ್ಟೆ, ರಾಮ ಮಂದಿರ ವೃತ್ತ, ಖರ್ಗೆ ಪೆಟ್ರೋಲ್ ಬಂಕ್ ವೃತ್ತ, ಹುಮನಾಬಾದ್ ವೃತ್ತ ಸೇರಿದಂತೆ ನಗರದ ಎಲ್ಲೆಲ್ಲೂ ಮಾವಿನ ವಹಿವಾಟು ಜೋರಾಗಿದೆ. ತಳ್ಳು ಬಂಡಿ, ಜ್ಯೂಸ್ ಸೆಂಟರ್, ಹಣ್ಣುಗಳ ಅಂಗಡಿಯಲ್ಲಿ ‘ಹಣ್ಣುಗಳ ರಾಜ’ ಮಾವು ‘ಕಾರುಬಾರು’ ನಡೆಸುತ್ತಿದೆ. ನೋಡುಗರ ಬಾಯಲ್ಲಿ ನೀರೂರಿಸುತ್ತಿವೆ.
ಕೇಸರ್ ತನ್ನ ಬಣ್ಣದಿಂದಲೇ ಗ್ರಾಹಕರನ್ನು ಸೆಳೆದು ವಹಿವಾಟು ಕುದುರಿಸುತ್ತಿದೆ. ಹಸಿ-ಹಸಿಯಂತೆ ಕಂಡರೂ ದಶೇರಿ ಸುವಾಸನೆಯಿಂದ ಬಿಕರಿಯಾಗುತ್ತಿದೆ. ದೊಡ್ಡ ಗಾತ್ರ ಹಾಗೂ ಹಳದಿ ವರ್ಣದಿಂದಲೇ ಬೆನಿಶಾನ್ ತನ್ನದೇಯಾದ ಮಾರುಕಟ್ಟೆ ಗಿಟ್ಟಿಸುತ್ತಿದೆ.
‘ತೆಲಂಗಾಣದ ಜಹೀರಾಬಾದ್ ಪ್ರದೇಶ, ಹೈದರಾಬಾದ್ ಮಾರುಕಟ್ಟೆಗಳಿಂದ ದಶೇರಿ ಕಲಬುರಗಿ ಪ್ರವೇಶಿಸುತ್ತಿದೆ. ಬೆನಿಶಾನ್ ಕೂಡ ಹೈದರಾಬಾದ್‌ನಿಂದಲೇ ಹೆಚ್ಚಾಗಿ ಆವಕವಾಗುತ್ತಿದೆ. ಮಲೈಕಾ ಸ್ಥಳೀಯ ಮಾರುಕಟ್ಟೆಯಿಂದ ಸಿಗುತ್ತಿದೆ. ಆಪೂಸ್ ಹಣ್ಣು ಮಹಾರಾಷ್ಟ್ರದ ರತ್ನಗಿರಿ, ದೇವಗಡ ಭಾಗದಿಂದ ಬರುತ್ತಿದೆ’ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ.