ಟೆಹರಾನ್, ಮೇ 8: ಇರಾನ್ನ ಸರಕು ಸಾಗಣೆ ಹಡಗಿನ ಮೇಲೆ ಅಮೆರಿಕ ಪಡೆಗಳು ಹೊರ್ಮುಜ್ ಜಲಸಂಧಿ ಸಮೀಪ ಗುರುವಾರ ಮಧ್ಯರಾತ್ರಿ ದಾಳಿ ನಡೆಸಿದ್ದು, ಘಟನೆಯಲ್ಲಿ 10 ನಾವಿಕರು ಗಾಯಗೊಂಡು, ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ.
ಏಪ್ರಿಲ್ 8ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ ಅಮೆರಿಕ ದಾಳಿ ನಡೆಸಿದೆ. ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗಿದೆ ಎಂದು ಇರಾನ್ ತಿಳಿಸಿದೆ.
ಹೊರ್ಮುಜ್ ಜಲಸಂಧಿ ಹಾಗೂ ಗಲ್ಫ್ ಆಫ್ ಓಮನ್ ಪ್ರದೇಶದಲ್ಲಿ ಅಮೆರಿಕ ಭಾರೀ ದಾಳಿ ನಡೆಸಿದ ಪರಿಣಾಮ ಸಮುದ್ರದಲ್ಲಿದ್ದ ಸರಕು ಸಾಗಣೆ ಹಡಗಿಗೆ ಬೆಂಕಿ ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ನಾವಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಇರಾನ್ ಸೇನೆ ಕ್ಷಿಪಣಿ, ಡ್ರೋನ್ ಹಾಗೂ ಸಣ್ಣ ಹಡಗುಗಳ ಮೂಲಕ ಅಮೆರಿಕ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಅದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಆದರೆ, ಅಮೆರಿಕದ ದಾಳಿ ನೇರವಾಗಿ ಇರಾನ್‌ನ ಸರಕು ಸಾಗಣೆ ಹಡಗನ್ನೇ ಗುರಿಯಾಗಿಸಿಕೊಂಡಿತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.