
ಮಂಗಳೂರು, ಏಪ್ರಿಲ್ 21: ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಮಂಗಳೂರಿಗೆ ಭೇಟಿ ನೀಡಿ ಕಮಿಷನರೇಟ್ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಿಬ್ಬಂದಿ ವ್ಯವಸ್ಥಾಪನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಉತ್ತರ ಕರ್ನಾಟಕ ಮೂಲದ ಕಾನ್ಸ್‌ಟೇಬಲ್‌ಗಳ ವರ್ಗಾವಣೆ ವಿಚಾರ ಚರ್ಚೆಗೆ ಗ್ರಾಸವಾಯಿತು.
ವರ್ಗಾವಣೆ ಆದೇಶ ಬಂದಿದ್ದರೂ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಸಿಬ್ಬಂದಿಯನ್ನು ರಿಲೀವ್ ಮಾಡುತ್ತಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಡಿಜಿಪಿಗೆ ಮನವಿ ಸಲ್ಲಿಸಿದರು.
ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ನಾಲ್ಕು ತಿಂಗಳಾದರೂ ರಿಲೀವ್ ನೀಡದಿರುವುದು ಅನ್ಯಾಯ. ಕುಟುಂಬ ಹಾಗೂ ಮಕ್ಕಳ ಶಿಕ್ಷಣ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ ಸಲೀಂ, ಹಂತ ಹಂತವಾಗಿ ಸುಮಾರು 15 ಶೇಕಡಾ ಸಿಬ್ಬಂದಿಯನ್ನು ರಿಲೀವ್ ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.