ಬೀದರ್, ಮೇ.೧೭- ಪ್ರಧಾನಿ ನರೇಂದ್ರ ಮೋದಿಯವರ ಮಿತವ್ಯಯ ಕರೆ ಬೆನ್ನಲ್ಲೇ ಜಿಲ್ಲೆಯ ಬಸವಕಲ್ಯಾಣದಲ್ಲಿ ಚಿನ್ನದಂಗಡಿ ಮಾಲೀಕರೊಬ್ಬರು ಕಾರು ಬಿಟ್ಟು ಸೈಕಲ್‌ನಲ್ಲಿ ಅಂಗಡಿಗೆ ತೆರಳಿದ್ದಾರೆ.
ನಿತ್ಯ ಕಾರಿನಲ್ಲಿ ಹೋಗುತ್ತಿದ್ದ ಬಂಗಾರದ ಅಂಗಡಿ ಮಾಲೀಕ ರೇವಣಪ್ಪ, ಇದೀಗ ಪ್ರಧಾನಿ ಮೋದಿಯವರ ಕರೆಯಂತೆ ಕಾರು ಬಿಟ್ಟು ಸೈಕಲ್‌ನಲ್ಲಿ ಸಂಚರಿಸಲು ಪ್ರಾರಂಭಿಸಿದ್ದಾರೆ. ಬಸವಕಲ್ಯಾಣ ಪಟ್ಟಣದ ಗೋಲ್ಡ್ ಮಾರ್ಕೆಟ್‌ನಲ್ಲಿರುವ ಅವರ ಚಿನ್ನದ ಅಂಗಡಿಗೆ ಇವರು ಸುಮಾರು ೨ ಕಿಮೀನಷ್ಟು ಸುಡು ಬಿಸಿಲಿನಲ್ಲಿ ಸೈಕಲ್ ತುಳಿದು ಸಂಚರಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ರೇವಣಪ್ಪ, ಪ್ರಧಾನಿ ಮೋದಿ ಹೇಳಿದ್ದಕ್ಕಾಗಿ ಇನ್ಮುಂದೆ ಕಾರು, ಬೈಕ್ ಬಿಟ್ಟು ಸೈಕಲ್ ಮೂಲಕವೇ ಸಂಚರಿಸುವೆ. ದೇಶದ ಹಿತಕ್ಕಾಗಿ ಇಂಧನ ಉಳಿಸುವುದು ಅವಶ್ಯಕವಾಗಿದೆ. ಹೀಗಾಗಿ ಸೈಕಲ್ ಬಳಸಿದರೆ ಇಂಧನ ಉಳಿಸಬಹುದು ಎಂದಿದ್ದಾರೆ.
ರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಗುತ್ತಿದೆ. ಈ ಕಾರಣದಿಂದಾಗಿ ಮೋದಿಯವರು ದೇಶದ ಜನತೆಗೆ ಮಿತವ್ಯಯ ಕರೆ ನೀಡಿದ್ದರು. ಪ್ರಧಾನಿ ಕರೆಗೆ ಸ್ವತಃ ಬಿಜೆಪಿಯ ನಾಯಕರಿಂದಲೇ ಅಭಿಯಾನ ಆರಂಭವಾಗಿದೆ. ಪ್ರಧಾನಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಶೇ.೫೦ ರಷ್ಟು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದರು. ಕಳೆದ ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಯಲ್ ಎನ್ಫೀಲ್ಡ್ ಬುಲೆಟ್ನಲ್ಲಿ ವಿಧಾನಸೌಧಕ್ಕೆ ಬಂದಿದ್ದರು. ಇದರ ನಡುವೆ ದೇಶವ್ಯಾಪಿ ಜನಸಾಮಾನ್ಯರಿಂದಲೂ ಮೋದಿಯವರ ಕರೆಗೆ ಸ್ಪಂದನೆ ವ್ಯಕ್ತವಾಗುತ್ತಿದೆ.