ಬೇಕಾಬಿಟ್ಟಿ ಕರ್ತವ್ಯಕ್ಕೆ ಗೈರು: ಅಧಿಕಾರಿಗಳಿಗೆ ಸದಾಶಿವ ಕ್ಷತ್ರಿಯ ಎಚ್ಚರಿಕೆ.
ಅಫಜಲಪೂರ : ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ಬೇಸಿಗೆ ಅವಧಿಯಲ್ಲಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಾಲೂಕು ಜಯ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಸದಾಶಿವ ಕ್ಷತ್ರಿಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಅವರು, ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಸಮಯಕ್ಕೆ ಸಿಗದ ಕಾರಣ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಿಯಮಿತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಉಪಾಧ್ಯಕ್ಷ ಮುತ್ತು ಕುರಿಮನಿ ಮಾತನಾಡಿ, ತಾಲೂಕಿನಲ್ಲಿ ಅನೇಕ ಕಡೆ ಕಳಪೆ ಕಾಮಗಾರಿಗಳು ನಡೆದಿರುವುದಾಗಿ ಆರೋಪಿಸಿದರು. ಪಟ್ಟಣದ ಲಿಂಬೆತೋಟ ಪ್ರದೇಶದಲ್ಲಿ ನಡೆದ ಚರಂಡಿ ಕಾಮಗಾರಿ ದೋಷಪೂರಿತವಾಗಿದ್ದು, ಚರಂಡಿ ನೀರು ಮನೆಗಳ ಗೋಡೆಗಳಿಗೆ ತಾಗುತ್ತಿದ್ದು ಅವು ಶಿಥಿಲಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಅಲ್ಲದೆ, ಭೀಮಾ ನದಿ ಸಮೀಪದಲ್ಲಿದ್ದರೂ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ ಎಂಬುದೂ ವಿಷಾದನೀಯ ಸಂಗತಿ. ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ತಾಲೂಕು ಪಂಚಾಯತ್ ಹಾಗೂ ಪುರಸಭೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.