ಬಸವಕಲ್ಯಾಣದಲ್ಲಿ ಜೂನ್ ೨೮ರಂದು ಸನಾತನವಾದಿಗಳ ವಿರುದ್ಧ ಬೃಹತ್ ಪ್ರತಿಭಟನೆ

 

ಬೀದರ್, ಜೂ.೨೫- ಬಸವಾದಿ ಶರಣರ ಉದಾತ್ತ ತತ್ವಗಳನ್ನು ತಿರುಚುವ ಹಾಗೂ ಶರಣರ ಹೆಸರಿನಲ್ಲಿ ಸನಾತನ ಮೌಲ್ಯಗಳನ್ನು ಬಿತ್ತುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಜೂನ್ ೨೮ರಂದು ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ಚಿಂತನಕಾರ್ತಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಚಾರಿಕ ಕ್ರಾಂತಿಯ ಭೀತಿ: ಸಮಾನತೆ ಮತ್ತು “ದೇಹವೇ ದೇವಾಲಯ” ಎಂದು ಸಾರಿದ ಬಸವತತ್ವಗಳು ವಿಶ್ವಾದ್ಯಂತ ಪಸರಿಸುತ್ತಿರುವುದು ಪುರೋಹಿತಶಾಹಿಗಳಿಗೆ ನಡುಕ ಹುಟ್ಟಿಸಿದೆ. ಮೌಢ್ಯ, ಕಂದಾಚಾರ ಹಾಗೂ ಶೋಷಣೆಯ ಮೂಲಕ ನಡೆಯುತ್ತಿರುವ ತಮ್ಮ ದೇವೋದ್ಯಮಕ್ಕೆ ಧಕ್ಕೆಯಾಗಲಿದೆ ಎಂಬ ಭೀತಿಯಿಂದಲೇ ಶರಣ ತತ್ವಗಳು ಜಾರಿಯಾಗದಂತೆ ಅವರು ಕುತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬಲದಿಂದ ಶೋಷಿತ ಸಮುದಾಯಗಳು ಅಕ್ಷರ ಕಲಿತು ವಚನಗಳ ನೈಜ ಮರ್ಮವನ್ನು ಅರಿಯುತ್ತಿವೆ. ವಚನ ಸಾಹಿತ್ಯವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಎಂದು ಅರಿತ ಪಟ್ಟಭದ್ರ ಹಿತಾಸಕ್ತಿಗಳು, ಇದೀಗ ಅರ್ಧಮರ್ಧ ವಚನಗಳನ್ನು ಉಲ್ಲೇಖಿಸಿ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಇದೊಂದು ಕ್ಯಾನ್ಸರ್ ಹಾಗೂ ಏಡ್ಸ್ ಇದ್ದ ಹಾಗೆ. ಹಿಂದೆ ಬಸವಣ್ಣವರನ್ನೆ ಕೊಲೆ ಮಾಡಿರುವ ಢೋಂಗಿಗಳು ಈಗ ಅವರ ತತ್ವಗಳನ್ನು ಕೊಲೆ ಮಾಡಲು ಹೊರಟಿದ್ದಾರೆ. ನೀವು ಹಿಂದು ಸಮಾವೇಶ ಮಾಡಿ ಆದರೆ ಬಸವಾದಿ ಶರಣರ ಹಿಂದು ಸಮಾವೇಶ ಮಾಡುವ ಮೂಲಕ ಲಕ್ಷಾಂತರ ಬಸವಾನುಯಾಯಿಗಳ ಮನಸ್ಸನ್ನು ನುಚ್ಚು ನೂರು ಮಾಡಲು ಹೊರಟಿರುವವರ ವಿರೂದ್ಧ ನಮ್ಮ ಹೋರಾಟ ಇರುತ್ತದೆ ಎಂದು ಅವರು ಹೇಳಿದರು.

ಇನ್ನೋರ್ವ ಚಿಂತಕಿ ಕೆ. ನೀಲಾ, ಹಿರಿಯ ಚಿಂತಕ ಪ್ರೊ. ಆರ್.ಕೆ. ಹುಡಗಿ ಅವರು ಮಾತನಾಡಿ, ವರ್ಣಾಶ್ರಮ ಧರ್ಮವನ್ನು ಒಪ್ಪುವ ಸನಾತನಿಗಳಿಗೂ ಹಾಗೂ ಅದನ್ನು ಧಿಕ್ಕರಿಸಿದ ಶರಣರಿಗೂ ಯಾವುದೇ ತಾತ್ವಿಕ ಸಂಬAಧವಿಲ್ಲ. ಪ್ರಸ್ತುತ ಕರ್ನಾಟಕದಲ್ಲಿ ಲಿಂಗಾಯತರನ್ನು ಗುರಿಯಾಗಿಸಿಕೊಂಡು, ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ಬಸವಣ್ಣನವರ ತತ್ವಗಳನ್ನು ವಿಕೃತಗೊಳಿಸುವ ಯತ್ನ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡರಾದ ಬಸವರಾಜ್ ಮಾಳಗೆ, ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರಾದ ಧನರಾಜ್, ಶಿವಶರಣ ದೇಗಾಂವ್, ಮಾರೂತಿ ಗೋಖಲೆ, ಆರ್.ಪಿ ರಾಜಾ, ಶಶಿಕಾಂತ ಡಾಂಗೆ, ರೇಷ್ಮಾ ಕುಂದನ್, ಅಂಬುಬಾಯಿ ಮಾಳಗೆ, ಗೌಸುದ್ದಿನ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment