ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ಬೀರ್, ಜೂ.೨೪- ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಸಂಘಟನೆಯನ್ನು ತಕ್ಷಣ ಕಾನೂನುಬದ್ಧವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪೀಟರ್ ಚೀಟಗುಪ್ಪಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಭಗತ್ ಸಿಂಗ್ ವೃತ್ತ ಮಾರ್ಗವಾಗಿ ತಹಸೀಲ್ದಾರರ ಕಚೇರಿವರೆಗೆ ಸಾಗಿತು. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸಹಸ್ರಾರು ಕರವೇ ಕಾರ್ಯಕರ್ತರು ಎಂ.ಇ.ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸಿಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿಯು ಜೂನ್ ೨೨ರಂದು ಬೆಳಗಾವಿ ಜಿಲ್ಲೆಯ ಕುಂದಾನಗರಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಕರ್ನಾಟಕ ಸರ್ಕಾರದ ಆದೇಶಗಳನ್ನು ಹರಿದು ಹಾಕಿರುವುದು ಹಾಗೂ ರಾಜ್ಯದ ಗಡಿ ಭಾಗಗಳಾದ ಬೀದರ, ಭಾಲ್ಕಿ, ಔರಾದ, ಬಸವಕಲ್ಯಾಣ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಬೇಡಿಕೆ ಮುಂದಿರಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಕರ್ನಾಟಕ ರಾಜ್ಯಕ್ಕೆ ಸೇರಿದ ಗಡಿ ಪ್ರದೇಶಗಳ ಕುರಿತು ಎಂ.ಇ.ಎಸ್ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯದ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಕರವೇ ಆರೋಪಿಸಿದೆ. ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸುವುದು ಹಾಗೂ ಚಾಲಕ-ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಹಲವು ಘಟನೆಗಳು ನಡೆದಿರುವುದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ಎಂ.ಇ.ಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ತಕ್ಷಣವೇ ನಿಷೇಧಿಸಬೇಕು ಹಾಗೂ ಕನ್ನಡ ಕಡ್ಡಾಯ ನೀತಿಯನ್ನು ವಿರೋಧಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಎಂ.ಇ.ಎಸ್ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾAವಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೊಕ್ರಾಣಿ, ಜಿಲ್ಲಾ ಕಾರ್ಯಾಧ್ಯಕ್ಷ ಜಗನಾಥ್ ಕೌಠಾ, ಜಿಲ್ಲಾ ಕಾರ್ಯದರ್ಶಿ ಮೋಜೆಸ್ ಅಣ್ಣದುರೆ, ಜಿಲ್ಲಾ ಸಹ ಕಾರ್ಯದರ್ಶಿ ಮೈಕಲ್ ಕಡ್ಯಾಳ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಅಶೋಕ್ ಕಡ್ಯಾಳ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೋರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರಕಾAತ್ ಪೊಳ್, ತಾಲ್ಲೂಕು ಅಧ್ಯಕ್ಷ ನೀಲೇಶ್ ರಾಠೋಡ್, ದಕ್ಷಿಣ ತಾಲೂಕು ಕಾರ್ಯದರ್ಶಿ ಸಂತೋಷ್ ಜೆ, ಜಿಲ್ಲಾ ಮುಖಂಡ ದಿನೇಶ್ ಕಮಠಾಣಾ, ನಗರ ಕಾರ್ಯಾಧ್ಯಕ್ಷ ಗಿರೀಶ್ ಓಂಕಾರ್, ನಗರ ಉಪಾಧ್ಯಕ್ಷ ಪ್ರಸಾದ್ ಘೋಡಂಪಳ್ಳಿಕರ್, ತಾಲ್ಲೂಕು ಉಪಾಧ್ಯಕ್ಷ ಧನರಾಜ್ ಚಿಟ್ಟವಾಡಿ, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ್ ಮಾಮುಡಗಿ, ತಾಲ್ಲೂಕು ಸಹ ಕಾರ್ಯದರ್ಶಿ ರಾಜಗೊಂಡ ಅಣದೂರಕರ್, ಜಿಲ್ಲಾ ಮುಖಂಡ ಸಂಜು ಚಿಮಕೋಡ್, ನಗರ ಕಾರ್ಯದರ್ಶಿ ಸ್ಟಿಫನ್ ಮೇತ್ರೆ, ನಗರ ಘಟಕದ ಕಾರ್ಯದರ್ಶಿ ಅಭಿಷೇಕ್ ಪಂಚಾಳ, ಜಿಲ್ಲಾ ಸಹ ಕಾರ್ಯದರ್ಶಿ ಪಿಂಟು ಸಿರ್ಸಿ, ಜಿಲ್ಲಾ ಮುಖಂಡ ಸುನೀಲ್ ಕುದ್ರೆ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.