ಸೇಡಂ, ಜೂ. 22: ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ ಹಾಗೂ ಸೋದರಳಿಯ ಜಲಸಮಾಧಿಯಾದ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ಮುಗನೂರ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಭದ್ರಸ್ವಾಮಿ (32) ಹಾಗೂ ಅವರ ಅಣ್ಣನ ಪುತ್ರ ಸದಾಶಿವ ಸ್ವಾಮಿ (10) ಎಂದು ಗುರುತಿಸಲಾಗಿದೆ.
ಶನಿವಾರ ಎಮ್ಮೆ ಮೇಯಿಸಲು ತೆರಳಿದ್ದ ಭದ್ರಸ್ವಾಮಿ ಮತ್ತು ಸದಾಶಿವ ಸ್ವಾಮಿ ಸಂಜೆ ವೇಳೆಯಾದರೂ ಮನೆಗೆ ಮರಳಿರಲಿಲ್ಲ. ಆದರೆ ಅವರು ಮೇಯಿಸಲು ಕರೆದೊಯ್ದಿದ್ದ ಎಮ್ಮೆಗಳು ಮಾತ್ರ ಮನೆಗೆ ವಾಪಸ್ಸಾಗಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಯಿತು.
ತಕ್ಷಣ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. ಈ ವೇಳೆ ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದ ಸಮೀಪ ಅವರ ಬಟ್ಟೆ ಮತ್ತು ಮೊಬೈಲ್ ಪತ್ತೆಯಾಯಿತು. ಅನುಮಾನಗೊಂಡ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಶೋಧ ಕಾರ್ಯಾಚರಣೆ ನಡೆಸಿ ಕೃಷಿ ಹೊಂಡದಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದರು. ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.