ಬಿರುಗಾಳಿ ಸಹಿತ ಮಳೆಗೆ ಮನೆ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

 

ಬೀದರ್, ಮೇ.೨೭- ಭಾರೀ ಬಿರುಗಾಳಿ ಸಹಿತ ಧಾರಾಕಾರ ಆಲಿಕಲ್ಲು ಮಳೆಗೆ ಮನೆಯ ಮೇಲಿದ್ದ ಕಲ್ಲು ಬಿದ್ದು ೬ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಲಸೂರು ಪಟ್ಟಣದ ತಹಸಿಲ್ದಾರ್ ಕಚೇರಿ ಬಳಿ ನಡೆದಿದೆ.

೬ ವರ್ಷದ ಮಾಹೆರಾ ಪೈಸ್ ಇಸ್ಮಾಯಿಲ್ ಶೇಕ್ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಮನೆಯಲ್ಲಿದ್ದ ಬಾಲಕಿಯ ತಂದೆ ಇಸ್ಮಾಯಿಲ್ (೪೦), ತಾಯಿ ಯಾಸ್ಮಿನ್ (೪೦) ಹಾಗೂ ಫಯಾಜ್ (೯) ಅವರು ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಈ ವೇಳೆ ಮೇಲ್ಛಾವಣಿ ಮೇಲೆ ಇಟ್ಟಿದ್ದ ಕಲ್ಲುಗಳು ಬಾಲಕಿ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಗಂಭೀರವಾಗಿ ಗಾಯಗೊಂಡ ಉಳಿದ ಮೂವರಿಗೆ ಹುಲಸೂರು ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಶಹಾಜನಿ ಔರಾದ್ ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸಿಲ್ದಾರ್ ಶಿವಾನಂದ್ ಮೇತ್ರೆ ಅವರು ಗಾಯಾಳುಗಳ ಆರೋಗ್ಯ ಸ್ಥಿತಿ ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ತಹಸಿಲ್ದಾರ್ ಮುಂದೆಯೇ ಆಕ್ರೋಶ ಹೊರಹಾಕಿ ವೈದ್ಯರಿಗೆ ಪೋಷಕರು ತರಾಟೆ ತೆಗೆದುಕೊಂಡರು

Share This Article
Leave a Comment