ಬೀದರ್, ಜೂ.೨೦- ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ಹಾಗೂ ಪಶುಸಂಗೋಪಕರಿಗೆ ತೀವ್ರ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯನ್ನು ಅನಾವೃಷ್ಟಿ ಪೀಡಿತ (ಬರಪೀಡಿತ) ಜಿಲ್ಲೆಯೆಂದು ಘೋಷಿಸಬೇಕು ಎಂದು ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ ಅವರು ಒತ್ತಾಯಿಸಿದರು.
ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಹವಾಮಾನ ಬದಲಾವಣೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ಸಮರ್ಪಕ ಮುಂಗಾರು ಮಳೆಯಾಗಿಲ್ಲ. ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ಇನ್ನೂ ಅನೇಕ ರೈತರು ಖರೀಫ್ ಬೆಳೆ ಬಿತ್ತನೆಗಾಗಿ ಕಾಯುತ್ತಿದ್ದಾರೆ. ರೈತರು ಬೀಜ ಹಾಗೂ ಗೊಬ್ಬರ ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದರೂ ಮಳೆಯ ಕೊರತೆಯಿಂದ ಆತಂಕಕ್ಕೊಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದಲ್ಲದೆ, ಮಳೆಯ ಕೊರತೆಯಿಂದ ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಗೊಂಡಿದೆ. ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾದ ಕಾರಂಜಾ ಯೋಜನೆಯು ಬೀದರ, ಭಾಲ್ಕಿ ಹಾಗೂ ಔರಾದ ತಾಲೂಕಿನ ಹಲವು ಗ್ರಾಮಗಳಿಗೆ ಜೀವನಾಡಿಯಾಗಿದ್ದು, ತಕ್ಷಣವೇ ಕಾರಂಜಾ ಆಣೆಕಟ್ಟಿನ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜೊತೆಗೆ, ಚುಳಕಿ ನಾಲಾ ಆಣೆಕಟ್ಟಿನ ಕಾಲುವೆಗಳಿಗೂ ನೀರು ಹರಿಸಿ ಪಶು-ಪಕ್ಷಿಗಳ ಜೀವ ಉಳಿಸಲು ಕ್ರಮ ಕೈಗೊಳ್ಳಬೇಕು. ಆದ್ದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಗೌರವಾಧ್ಯಕ್ಷ ಶಿವರಾಯ ಮುದಾಳೆ, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಖಮರ್ ಪಟೇಲ್ ಹಾಗೂ ಸಿದ್ದೀವಿನಾಯಕ ಮುಂತಾದವರು ಉಪಸ್ಥಿತರಿದ್ದರು.