ಕಲಬುರ್ಗಿ, ಜೂ.೧೯-೧೬ ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ತನ್ನ ಪ್ರಿಯಕರ ನಗರದ ಕುಸನೂರು ರಸ್ತೆಯಲ್ಲಿರುವ ರೇಷ್ಮೆ ಕಾಲೇಜು ಹಿಂದುಗಡೆ ನಿವಾಸಿ ರೋಹಿತ್ ರಾಠೋಡ್ ಜೊತೆಗೆ ಹೋಗಿರಬಹುದು ಎಂದು ಬಾಲಕಿಯ ತಂದೆ ªಮಲ್ಲಿಕಾರ್ಜುನ್ ಡೊಳ್ಳೆ ಅವರು ದೂರು ಸಲ್ಲಿಸಿದ್ದು, ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಳ ಚಿತ್ತಾಪುರ ತಾಲ್ಲೂಕಿನ ಮುಡಬೂಳ್ ಗ್ರಾಮದ ಮಲ್ಲಿಕಾರ್ಜುನ್ ಡೊಳ್ಳೆ ಅವರು ನಗರದಲ್ಲಿ ವಾಸವಾಗಿದ್ದು, ಬುದ್ದ ವಿಹಾರದ ಬಳಿ ಖಾನಾವಳಿ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಖಾನಾವಳಿ ಹಿಂದೆ ಕೆಫೆಯೊಂದು ಇದ್ದು, ಅಲ್ಲಿ ರೋಹಿತ್ ರಾಠೋಡ್ ಕೆಲಸ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಬಾಲಕಿಗೆ ಪರಿಚಯವಾಗಿದ್ದು, ಆಕೆ ಆತನೊಂದಿಗೆ ಹೋಗಿರುವ ಶಂಕೆಯನ್ನು ತಂದೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.