ಬೀದರ್‌ನಲ್ಲಿ ಜೂನ್ ೨೨ಕ್ಕೆ ಕನಕದಾಸರ ನೃತ್ಯ ರೂಪಕ ಪ್ರದರ್ಶನ

 

ಬೀದರ್, ಜೂ.೧೯- ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜೂನ್ ೨೨ರಂದು ಸಂಜೆ ೬.೩೦ಕ್ಕೆ ಹಮ್ಮಿಕೊಳ್ಳಲಾದ ಕನಕದಾಸರ ಕುರಿತ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ ಹಾಗೂ ನೃತ್ಯ ರೂಪಕ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಕುರಿ ಮಹಾ ಮಂಡಳದ ನಿರ್ದೇಶಕ ಪಂಡಿತರಾವ್ ಚಿದ್ರಿ ಅವರು ಮನವಿ ಮಾಡಿದ್ದಾರೆ.

ಕನಕದಾಸರು ೧೫-೧೬ನೇ ಶತಮಾನದ ಶ್ರೇಷ್ಠ ಸಂತರು. ಸಮ ಸಮಾಜ ಕಟ್ಟಲು ಶ್ರಮಿಸಿದ್ದರು. ರೂಪಕವು ಅವರು ಬೋಧಿಸಿದ ಸಹೋದರತ್ವ, ಸಹಬಾಳ್ವೆ, ಸಹಿಷ್ಣುತೆ, ದಯೆ, ಕರುಣೆ ಮೊದಲಾದ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಲಿದೆ. ಕೀರ್ತನೆಗಳ ಮೂಲಕ ಜಾತಿ, ವರ್ಗ, ವರ್ಣ ತಾರತಮ್ಯ, ಮೌಢ್ಯದ ವಿರುದ್ಧ ಅವರು ಅವರು ಮೂಡಿಸಿದ ಜಾಗೃತಿಯನ್ನು ಬಿಚ್ಚಿಡಲಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ವಿಶೇಷ ನೃತ್ಯ ರೂಪಕ ಸಿದ್ಧಪಡಿಸಿದೆ. ಖ್ಯಾತ ಕಲಾವಿದರು ಮನೋಜ್ಞವಾಗಿ ರೂಪಕ ಪ್ರದರ್ಶಿಸಲಿದ್ದು, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಇದಕ್ಕೆ ಸಹಕಾರ ನೀಡಲಿದ್ದಾರೆ. ನೃತ್ಯ ರೂಪಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಖಾತೆ ಸಚಿವ ಈಶ್ವರ ಖಂಡ್ರೆ, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾತ ಚಿಕ್ಕಣ್ಣ, ಹಿರಿಯ ರಂಗ ಸಂಘಟಕ ಶ್ರಿನಿವಾಸ್ ಜಿ. ಕಪ್ಪಣ್ಣ, ಜಿಲ್ಲೆಯ ಜನಪ್ರತಿನಿಧಿಗಳು, ಸಾಂಸ್ಕೃತಿಕ ಸಂಘಟಕರು, ಗಣ್ಯರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುಂದರ ಸಮಾಜ ನಿರ್ಮಾಣಕ್ಕೆ ಕನಕದಾಸರ ತತ್ವಗಳು ಬಹು ಅವಶ್ಯಕವಾಗಿದ್ದು, ಜಿಲ್ಲೆಯ ಜನ ಕನಕದಾಸರ ಕುರಿತ ಸಂಗೀತ ಹಾಗೂ ನೃತ್ಯ ರೂಪಕ ಪ್ರದರ್ಶನದ ಸದುಪಯೋಗ ಪಡೆಯಬೇಕು ಎಂದು ಅವರು ಕೋರಿದ್ದಾರೆ.

Share This Article
Leave a Comment