ಬೀದರ್, ಜೂ.೧೯- ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರಂಜಾ ಮುಳುಗಡೆ ಸಂತ್ರಸ್ತರ ಬಗ್ಗೆ ಸಮಗ್ರವಾಗಿ ಗೊತ್ತಿದೆ. ಹೀಗಾಗಿ ಅವರು ಕಾಲಮಿತಿಯಲ್ಲಿ ಅಂದರೆ ಹದಿನೈದು ದಿನಗಳೊಳಗೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷö್ಮಣ್ ದಸ್ತಿ ಅವರು ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೯೮೧ರಿಂದ ೮೬ರ ಅವಧಿಯಲ್ಲಿ ನೀರಾವರಿ ಯೋಜನೆ ನಿರ್ಮಾಣಕ್ಕಾಗಿ ಸುಮಾರು ೨೮ ಹಳ್ಳಿಗಳ ರೈತ ಸಂತ್ರಸ್ತರು ಯಾವುದೇ ಷರತ್ತಿಲ್ಲದೆ ಭೂಮಿ ನೀಡಿದ್ದಾರೆ. ಪರಿಹಾರಕ್ಕಾಗಿ ೨೦೧೮ರಲ್ಲಿ ೭೦ ದಿವಸಗಳ ಕಾಲ ಹೋರಾಟ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನಮಗೆ ಬೆಂಗಳೂರಿಗೆ ಕರೆಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸುವಂತೆ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದರು. ಬಂಡೆಪ್ಪ ಖಾಶೆಂಪುರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಇವರೆಲ್ಲರ ಮಾತಿಗೆ ಬೆಲೆಕೊಟ್ಟು ಹೋರಾಟ ಹಿಂಪಡೆಯಲಾಗಿತ್ತು ಎಂದರು.
ನAತರ ೨೦೧೯ರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವೂ ನಮಗೆ ನಿರ್ಲಕ್ಷö್ಯ ಧೋರಣೆ ತೋರಿತು. ೨೦೨೨ರ ಜುಲೈನಿಂದ ಸುಮಾರು ೯೨೬ ದಿವಸಗಳ ಕಾಲ ಸಂತ್ರಸ್ತರಿAದ ನಿರಂತರ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಈ ಕಾರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಮುತುವರ್ಜಿಯಿಂದ ಅಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಹಿಂಖಾನ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಬೆಳಗಾವಿ ಅಧಿವೇಶನದಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕುರಿತು ಚರ್ಚಿಸಿ ಒಂದೆರಡು ವಾರದಲ್ಲಿ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಬೀದರನಲ್ಲಿ ಸಂತ್ರಸ್ತರು ವಿಷಪ್ರಾಶನ ಮಾಡಿದ್ದರು. ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇತ್ತಿಚೆಗೆ ಬೀದರನಲ್ಲಿ ಜರುಗಿದ ಪತ್ರಕರ್ತರ ೪೦ನೇ ರಾಜ್ಯ ಸಮ್ಮೇಳನಕ್ಕೆ ಆಗಮಿಸಿದ್ದಾಗಲೂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಬೇಡಿಕೆ ಹಾಗೆಯೇ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಚಟುವಟಿಕೆಗಳ ಕಾರಣಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಗಳಾದರು. ಹೀಗಾಗಿ ನಮ್ಮ ಮೂರು ಬೇಡಿಕೆಗಳಾದ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಬೇಕು. ಜಿಲ್ಲಾಡಳಿತ ಕಚೇರಿಯಲ್ಲಿ ಭೂ ಸ್ವಾಧಿನಾಧಿಕಾರಿ ಹುದ್ದೆ ಖಾಲಿ ಇದೆ. ಈ ಮಹತ್ವದ ಹುದ್ದೆ ಭರ್ತಿ ಮಾಡಬೇಕು. ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆ ಸಚಿವ ಈಶ್ವರ ಖಂಡ್ರೆಯವರು ಕಾರಂಜಾ ಸಂತ್ರಸ್ತರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಗಂಭೀರವಾಗಿ ಮತ್ತು ಸವಾಲಾಗಿ ತೆಗೆದುಕೊಂಡು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿದ ಅವರು, ಸಚಿವ ಸಂಪುಟ ರಚನೆಯ ನಂತರ ೧೫ ದಿನಗಳ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ತತ್ವದಂತೆ ನಿರಂತರ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೋಚಕನಳ್ಳಿ ಅವರು ಮಾತನಾಡಿ, ತಮ್ಮ ಜಮೀನು ಕಳೆದುಕೊಂಡ ನಂತರ ಕಾರಂಜಾ ಮುಳುಗಡೆ ಸಂತ್ರಸ್ತರು ಗ್ರಾಮಗಳನ್ನು ತೊರೆದು ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಸಚಿವ ಈಶ್ವರ ಖಂಡ್ರೆಯವರು ವಿಶೇಷ ಮುತುವರ್ಜಿ ವಹಿಸಿ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ವಿನಯಕುಮಾರ್ ಮಾಳಗೆ ಅವರು ಮಾತನಾಡಿ, ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಿದರೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿಸುವುದು ದೊಡ್ಡ ವಿಷಯವೇನಲ್ಲ. ಗ್ಯಾರಂಟಿ ಕೊಡಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ. ಆದರೂ ಸರ್ಕಾರ ತಮ್ಮ ರಾಜಕೀಯ ಇಚ್ಛಾಶಕ್ತಿಯಂತೆ ನೀಡಿದೆ. ಅದೇ ಮಾದರಿಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಒದಗಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರಾದ ಮಲ್ಲಿನಾಥ ಕಲಬುರಗಿ, ರಾಜಪ್ಪಾ ಕಮಲಾಪುರ, ಡಾ. ರಾಜಕುಮಾರ್ ಬುಸ್ಸಾ, ಸಂಗಾರೆಡ್ಡಿ ಔರಾದ, ವೀರೇಂದ್ರ ಮರಕಲ್, ಮಾದಪ್ಪ ಕೌದೆ, ಲಕ್ಷಿö್ಮÃಬಾಯಿ ಕೆ. ಅಹ್ಮದ್ ಬಗದಲ್, ಯೂಸೂಫ್ ಮಿಯಾ, ಬಸವರಾಜ್ ಹಿಂದಾ, ಮಾಣಿಕಪ್ಪ ನೆಲವಾರ, ಪ್ರಭುರಾವ್ ತೂಗಾಂವ್, ಶಂಕರೆಪ್ಪ ನಾರಾ ಮುಂತಾದವರು ಉಪಸ್ಥಿತರಿದ್ದರು.