ರಾಜ್ಯ ಸರ್ಕಾರದ ವಿದ್ಯಾ ವಿಕಾಸ ಯೋಜನೆಯಡಿ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕಿದ್ದ ಪಠ್ಯಪುಸ್ತಕಗಳ ವಿತರಣೆ ವಿಳಂಬವಾಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದ್ದರು. ಇದುವರೆಗೆ ಈ ಯೋಜನೆಯಡಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ, ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸಲಾಗುತ್ತಿತ್ತು.
ಈ ವರ್ಷದಿಂದ ಯೋಜನೆಯನ್ನು ವಿಸ್ತರಿಸಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಶೈಕ್ಷಣಿಕ ವರ್ಷ ಆರಂಭವಾಗಿ ಸಾಕಷ್ಟು ದಿನಗಳು ಕಳೆದರೂ ಅನೇಕ ಪದವಿಪೂರ್ವ ಕಾಲೇಜುಗಳಿಗೆ ಪುಸ್ತಕಗಳು ತಲುಪಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಗಳು ದೂರು ನೀಡಿವೆ.
ಪಠ್ಯಪುಸ್ತಕಗಳ ಕೊರತೆಯಿಂದ ಬೋಧನಾ ಕಾರ್ಯ ಹಾಗೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡಚಣೆ ಉಂಟಾಗಿದ್ದು, ಶೀಘ್ರದಲ್ಲಿ ಪುಸ್ತಕಗಳನ್ನು ಪೂರೈಸುವಂತೆ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ.