ಕುಂಬಾರವಾಡ ಸರ್ಕಾರಿ ಜಮೀನು ಅತಿಕ್ರಮಣ ಯತ್ನ: ಸಚಿವರಿಗೆ ದೂರು

 

ಬೀದರ್, ಜೂ.೧೮- ನಗರದ ಕುಂಬಾರವಾಡ ಪ್ರದೇಶದಲ್ಲಿರುವ ಸರ್ಕಾರಿ ಗೈರಾಣ ಜಮೀನು ಹಾಗೂ ಖಾಸಗಿ ಜಮೀನುಗಳನ್ನು ಅತಿಕ್ರಮಿಸುವ ಉದ್ದೇಶದಿಂದ ಕೆಲವರು ಜಾತಿ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಕುಂಬಾರವಾಡದ ಕ್ರಿಶ್ಚಿಯನ್ ಸಮುದಾಯದ ಮಹಿಳೆಯರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ತಹಸಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಸರ್ವೆ ನಂ. ೫೧/* ರ ಸರ್ಕಾರಿ ಜಮೀನಿನಲ್ಲಿ ಸುಮಾರು ೫೦ ವರ್ಷಗಳಷ್ಟು ಹಳೆಯ ನೀರಿನ ಟ್ಯಾಂಕ್ ಹಾಗೂ ಬೋರ್‌ವೆಲ್ ಇದ್ದು, ಈ ಭಾಗದ ನೂರಾರು ಕುಟುಂಬಗಳಿಗೆ ಅದು ಪ್ರಮುಖ ನೀರಿನ ಮೂಲವಾಗಿದೆ ಎಂದು ತಿಳಿಸಲಾಗಿದೆ. ೧೯೭೨ರ ಬರಗಾಲದ ಸಂದರ್ಭದಲ್ಲಿ ಸರ್ಕಾರ ನಾಲ್ಕು ಬೋರ್‌ವೆಲ್‌ಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ ಒಂದು ಇದೇ ಸ್ಥಳದಲ್ಲಿದೆ. ಇತ್ತೀಚೆಗೆ ಮಹಾನಗರ ಪಾಲಿಕೆಯಿಂದ ಮತ್ತೊಂದು ಬೋರ್‌ವೆಲ್ ಅಳವಡಿಸಲಾಗಿದ್ದು, ಇಂದಿಗೂ ಸ್ಥಳೀಯರು ಅಲ್ಲಿಂದಲೇ ನೀರು ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೇ ೧೮ರಂದು ಬೆಳಿಗ್ಗೆ ಕೆಲ ಕಿಡಿಗೇಡಿಗಳು ಸರ್ಕಾರಿ ಜಮೀನಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ನೀಲಿ ಧ್ವಜ ಅಳವಡಿಸಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಪಡೆದ ಗಾಂಧಿಗAಜ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಧ್ವಜ ತೆರವುಗೊಳಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ಎಂದು ಅವರು ಹೇಳಿದರು.

ಈಗಾಗಲೇ ಸುಮಾರು ೫೦ ವರ್ಷಗಳಿಂದ ಕುಂಬಾರವಾಡಾ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಅಂಬೇಡ್ಕರ್ ಜಯಂತಿ ಮತ್ತು ಮಹಾಪರಿನಿರ್ವಾಣ ದಿನದಂತಹ ಕಾರ್ಯಕ್ರಮಗಳನ್ನು ಅಲ್ಲಿ ಆಚರಿಸಲಾಗುತ್ತಿದೆ. ಆದರೂ ಸಮುದಾಯ ಭವನದ ನೆಪದಲ್ಲಿ ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿದರು.

ಜಾತಿ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಜಮೀನುಗಳನ್ನು ಅತಿಕ್ರಮಿಸಲು ಯತ್ನಿಸುತ್ತಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ಇದಲ್ಲದೆ, ಕೆಲ ಖಾಸಗಿ ಜಮೀನುಗಳ ಮೇಲೂ ಅತಿಕ್ರಮಣ ನಡೆದಿದೆ ಎಂದು ಆರೋಪಿಸಿರುವ ಮಹಿಳೆಯರು, ಕ್ರಿಶ್ಚಿಯನ್ ಸಮುದಾಯದ ಮಹಿಳೆಯೊಬ್ಬರ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟೆ ನಿರ್ಮಿಸಿ ಭಾವಚಿತ್ರ ಹಾಗೂ ಧ್ವಜ ಅಳವಡಿಸಲಾಗಿದೆ. ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು ೧,೫೦೦ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳು ಹಾಗೂ ೨,೦೦೦ಕ್ಕೂ ಅಧಿಕ ಮನೆಗಳಿರುವ ಕುಂಬಾರವಾಡದಲ್ಲಿ ಎಲ್ಲ ಜಾತಿ-ಧರ್ಮದ ಜನರು ಸೌಹಾರ್ದದಿಂದ ಬದುಕುತ್ತಿದ್ದು, ಕೆಲವರ ಕ್ರಮಗಳಿಂದ ಜಾತಿ ವೈಮನಸ್ಸು ಮತ್ತು ಕೋಮು ಉದ್ವಿಗ್ನತೆ ಉಂಟಾಗುವ ಅಪಾಯ ಎದುರಾಗಿದೆ. ಸರ್ವೆ ನಂ. ೫೧/* ರಲ್ಲಿರುವ ಸರ್ಕಾರಿ ಜಮೀನನ್ನು ತಕ್ಷಣ ಸಂಬAಧಿತ ಇಲಾಖೆಯ ವಶಕ್ಕೆ ಪಡೆದು, ಅಲ್ಲಿರುವ ಹಳೆಯ ನೀರಿನ ಟ್ಯಾಂಕ್ ಹಾಗೂ ಬೋರ್‌ವೆಲ್ ಪ್ರದೇಶವನ್ನು ಸಾರ್ವಜನಿಕ ಬಳಕೆಗೆ ಕಾಯ್ದಿರಿಸಬೇಕು. ಜೊತೆಗೆ, ಅದೇ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸ್ಥಾಪಿಸಿ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

Share This Article
Leave a Comment