ಮಾನ್ಯ ಸಿದ್ಧರಾಜು ಸಿ., ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕಲಬುರಗಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ, ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಮಾಣಿಕ್ ಕನಕಟ್ಟಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಹತ್ವದ ಆಸ್ತಿ ಪತ್ತೆಯಾಗಿದೆ.
ಮಂಗಳವಾರ ಗೊದುತಾಯಿ ನಗರದ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದ ಲೋಕಾಯುಕ್ತ ತಂಡವು, ಬುಧವಾರ ನಗರದ ಎನ್.ವಿ. ಕಾಲೇಜು ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿರುವ ಲಾಕರ್‌ನ್ನು ತೆರೆಯಿಸಿ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಲಾಕರ್‌ನೊಳಗೆ ನೋಟು ಅಮಾನ್ಯೀಕರಣದ ಬಳಿಕ ಬಳಕೆಯಿಂದ ಹೊರಗುಳಿದ ₹1,000 ಮುಖಬೆಲೆಯ ನೂರಾರು ನೋಟುಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹9 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ಚಿನ್ನದ ಉಂಗುರಗಳು ಸೇರಿದಂತೆ ವಿವಿಧ ರೀತಿಯ ಚಿನ್ನಾಭರಣಗಳು ಲಾಕರ್‌ನಲ್ಲಿ ಪತ್ತೆಯಾಗಿದ್ದು, ಸುಮಾರು 20 ತೊಲಕ್ಕೂ ಅಧಿಕ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಅಧಿಕಾರಿಗಳು ಪತ್ತೆಯಾದ ನಗದು ಹಾಗೂ ಚಿನ್ನಾಭರಣಗಳ ಮೂಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಬಸವರಾಜ, ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ರಾಜಶೇಖರ ಬಡದೇಸಾರ ಹಾಗೂ ಇತರ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.