ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನರ್ಮದಾ ನದಿಯ ಬಾರ್ಗಿ ಡ್ಯಾಮ್‌ನಲ್ಲಿ ನಡೆದ ಬೋಟ್ ದುರಂತವು ದೇಶವನ್ನೇ ಬೆಚ್ಚಿಬೀಳಿಸಿದೆ. ನಿನ್ನೆ ನಡೆದ ಈ ಅವಘಡದಲ್ಲಿ 30 ಜನ ಪ್ರಯಾಣಿಕರಿದ್ದ ಬೋಟ್ ಮಗುಚಿ 9 ಜನರು ಮೃತಪಟ್ಟಿದ್ದು, 17 ಜನರನ್ನು ರಕ್ಷಿಸಲಾಗಿದೆ. ಇನ್ನೂ 4 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೃತರ ಪೈಕಿ ದೆಹಲಿ ಮೂಲದ ತಾಯಿ ಮತ್ತು ನಾಲ್ಕು ವರ್ಷದ ಮಗು ಎದೆಗಪ್ಪಿಕೊಂಡೇ ಶವವಾಗಿ ಪತ್ತೆಯಾಗಿರುವುದು ಮನಕಲಕುವ ಸಂಗತಿಯಾಗಿದೆ. ತಾಯಿ ತನ್ನ ಮಗುವನ್ನು ಉಳಿಸಲು ಕೊನೆಯ ಕ್ಷಣದವರೆಗೂ ಮಾಡಿದ ಪ್ರಯತ್ನ ವಿಫಲವಾದ ದೃಶ್ಯ ಎಲ್ಲರ ಹೃದಯವನ್ನು ಮುರಿದಿದೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಚಿತ್ರದಲ್ಲಿ ತಾಯಿ-ಮಗು ಒಂದೇ ಲೈಫ್ ಜಾಕೆಟ್‌ನಲ್ಲಿ ಕಂಡುಬಂದಿದ್ದು, ‘ತಾಯಿ ಪ್ರೀತಿಗೆ ಸಾಟಿಯಿಲ್ಲ’ ಎಂಬುದನ್ನು ತೋರಿಸುತ್ತದೆ. ಈ ಫೋಟೊವನ್ನು ಒಬ್ಬ ಪೊಲೀಸ್ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಭಾವುಕರಾಗಿ ಬರೆದಿದ್ದಾರೆ.
ಲೈಫ್ ಜಾಕೆಟ್ ಧರಿಸಿದ್ದರೂ ಅವರು ಬದುಕದಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೋಟ್ ಅಚಾನಕ್ ಮಗುಚಿದಾಗ ತಾಯಿ-ಮಗು ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದು, ಬಾಗಿಲು ತೆರೆಯದ ಕಾರಣ ಉಸಿರುಗಟ್ಟುವಿಕೆ ಸಂಭವಿಸಿದೆ ಎನ್ನಲಾಗಿದೆ. ನೀರಿನ ಮೇಲ್ಮೈಗೆ ಬಂದಿದ್ದರೆ ಲೈಫ್ ಜಾಕೆಟ್ ಸಹಾಯದಿಂದ ಬದುಕುವ ಸಾಧ್ಯತೆ ಇತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದ ಚಿತ್ರವನ್ನು ಹಲವು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಕ್ಲಿಕ್ಕಿಸಿದದ್ದೆಂದು ತಿಳಿದುಬಂದಿದೆ.
ಸ್ಥಳೀಯ ಹಬ್ಬದ ಹಿನ್ನೆಲೆಯಲ್ಲಿ ದೆಹಲಿಯಿಂದ ಬಂದಿದ್ದ ಪ್ರವಾಸಿಗರು ಬೋಟ್ ವಿಹಾರ ಕೈಗೊಂಡಿದ್ದರು. ಮೃತರಲ್ಲಿ ದೆಹಲಿ ಹಾಗೂ ಜಬಲ್ಪುರದ ನಿವಾಸಿಗಳಿದ್ದಾರೆ.
ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಸಂಪೂರ್ಣ ತನಿಖೆ ನಡೆಯಲಿದ್ದು, ಕಾರಣಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಘಟನೆಗೆ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಈ ದುರಂತವು ಮತ್ತೊಮ್ಮೆ ಸುರಕ್ಷತಾ ಕ್ರಮಗಳ ಮಹತ್ವವನ್ನು ನೆನಪಿಸುವುದರ ಜೊತೆಗೆ, ತಾಯಿ ಪ್ರೀತಿಯ ಅಮೂಲ್ಯತೆಯನ್ನು ಮನಸಿಗೆ ಮೂಡಿಸಿದೆ.