
ಕಲಬುರಗಿ: ಸರ್ಕಾರಿ ಪಿಯು ಕಾಲೇಜಿನಲ್ಲಿ ಮೇಲ್ಛಾವಣಿಯ ಒಂದು ಭಾಗ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಖಂಡಿಸಿ, ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ಕಲಬುರಗಿಯ ಎಸ್‌ವಿಪಿ ಚೌಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ, “ಪೋಷಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅಧಿಕಾರಿಗಳಾಗಲಿ ಎಂಬ ಕನಸಿನಿಂದ ಶಾಲೆ ಕಾಲೇಜುಗಳಿಗೆ ಕಳುಹಿಸುತ್ತಾರೆ. ಆದರೆ ಇಂದು ಮಕ್ಕಳು ಸುರಕ್ಷಿತ ಶಿಕ್ಷಣ ವಾತಾವರಣದ ಬದಲಿಗೆ ಗಾಯಗೊಂಡು ಮನೆಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಿಕ್ಷಣ ವ್ಯವಸ್ಥೆಯ ಮೇಲಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಅವರು ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಸುರಕ್ಷತೆ ಕುರಿತು ಸರ್ಕಾರ ತಕ್ಷಣ ಸಮಗ್ರ ಪರಿಶೀಲನೆ ನಡೆಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿವೈಎಫ್‌ಐ ಬೀದರ್ ಮುಖಂಡ ಶಶಿ ಡಾಂಗೆ ಮಾತನಾಡಿ, “ಇಂದು ಯುವಜನತೆ ಮತ್ತು ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡುತ್ತಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಆಗಿದೆ. ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದ್ದು, ಇದರ ಹೊಣೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊರಬೇಕು” ಎಂದು ಆರೋಪಿಸಿದರು.
ಎಸ್‌ಎ??? ಜಿಲ್ಲಾ ಅಧ್ಯಕ್ಷ ಸರ್ವೇಶ್ ಮಾವಿನಕರ್ ಮಾತನಾಡಿ, ” ಮೇಲ್ಛಾವಣಿ ಕುಸಿತದ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿಯ ತಲೆಗೆ 9 ಹೊಲಿಗೆಗಳು ಬಿದ್ದಿವೆ. ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ ಜನಪ್ರತಿನಿಧಿಗಳು ಏನೂ ಆಗದಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು” ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಇಮಾಮ್ ಮಾತನಾಡಿ, “ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಪೂರ್ಣವಾಗಿ ಭರಿಸಬೇಕು. ಜೊತೆಗೆ ಅವರಿಗೆ ಸೂಕ್ತ ಪರಿಹಾರವನ್ನು ಘೋಷಿಸಬೇಕು. ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ದುರಸ್ತಿ, ಸುರಕ್ಷತಾ ಪರಿಶೀಲನೆ ಹಾಗೂ ವಿದ್ಯಾರ್ಥಿಗಳ ಭದ್ರತೆಗೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಸಂಚಾಲಕ ಪ್ರಮೋದ್ ಪಂಚಾಳ, ಸಹ ಸಂಚಾಲಕ ಸಲ್ಮಾನ್ ಖಾನ್, ಪಾಂಡುರಂಗ ಮಾವಿನಕರ್, ಅನಿತಾ, ಅಕ್ಷರಾ, ವಿಜಯಲಕ್ಷ್ಮೀ, ಸೃಷ್ಟಿ, ವೈಷ್ಣವಿ, ಸಿಂಚನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.