ಜೇವರ್ಗಿ, ಜೂ.೯- ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಧರ್ಮಸಿಂಗ್ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು. ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾಗಿ ಹೇಳಿಕೊಳ್ಳುವ ಶಾಸಕರು ತಮ್ಮ ಕ್ಷೇತ್ರದ ಒಂದು ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸಹ ಒದಗಿಸಿಲ್ಲ ಎಂದರೆ ಅವರ ಕ್ಷೇತ್ರದ ಕಾಳಜಿ ಹಾಗೂ ಶಾಲೆ ಮತ್ತು ವಿದ್ಯಾರ್ಥಿಗಳ ಕಾಳಜಿ ಎಷ್ಟೆಂಬುದು ಬಹಿರಂಗಗೊಳ್ಳುತ್ತದೆ.
ಶಾಲೆಗೆ ಬರುವ ಮಕ್ಕಳು ಬಾಯಾರಿದರೆ ನೇರವಾಗಿ ಮನೆಗೆ ಹೋಗಿ ಕುಡಿಯಬೇಕು. ಶಾಲಾ ಮಧ್ಯದಲ್ಲಿ ಎದ್ದು ಹೊರಗೆ ಹೋಗುವಂತಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳು ಬಾಯಾರಿಕೆಯೊಂದಿಗೆ ಬಳಲಿ ಬೆಂಡಾಗಿ ಶಾಲೆಯ ತರಗತಿಗಳಿಗೆ ಕೂಡುವಂತಾಗಿದೆ.
ಶಾಲೆಯ ಆವರಣದಲ್ಲಿಯೇ ಒಂದು ಬೋರವೆಲ್ ಇದೆ. ನೀರು ಸಹ ಇದೆ. ಆದಾಗ್ಯೂ, ಅದು ದುರಸ್ತಿಗೆ ಒಳಗಾಗಿದ್ದು, ಕನಿಷ್ಠ ಆ ದುರಸ್ತಿ ಕಾರ್ಯವನ್ನೂ ಸಹ ಕೈಗೊಳ್ಳುವಲ್ಲಿ ಸಂಬAಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳು ನೀರಿಲ್ಲದೇ ಕೊರಗುವಂತಾಗಿದೆ.
ಈ ಕುರಿತು ಗ್ರಾಮದಶ್ರೀ ಸಿದ್ಧರಾಮೇಶ್ವರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘದ ಉಪಾಧ್ಯಕ್ಷ ಪರಶುರಾಮ್ ದಂಡಗೂಲ್ಕರ್ ಬಿಳವಾರ್ ಅವರು ಹೇಳಿಕೆಯನ್ನು ನೀಡಿ, ಸುಮಾರು ದಿನಗಳಿಂದ ಶಾಲೆಯ ಆವರಣದಲ್ಲಿರುವ ಬೋರವೆಲ್ ದುರಸ್ತಿ ಮಾಡಿಲ್ಲ. ಕೂಡಲೇ ದುರಸ್ತಿ ಮಾಡಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀರು ಕೊಡಬೇಕು. ಇಲ್ಲದೇ ಹೋದಲ್ಲಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.