ಹಿಜಾಬ್ ನಿರ್ಬಂಧ ರದ್ದತಿಯಿಂದ ಒಂದು ಬೇಡಿಕೆ ಇತ್ಯರ್ಥ: ಒಂಭತ್ತು ಬೇಡಿಕೆ ಈಡೇರಿಸಲು ಮುಸ್ಲಿಂ ಮುಖಂಡರ ಆಗ್ರಹ

 

ಕಲಬುರ್ಗಿ, ಜೂ.೭- ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಲ್ಲಿ ಮುಸ್ಲಿಂ ಸಮುದಾಯದ ಒಂದೇ ಒಂದು ಬೇಡಿಕೆ ಈಡೇರಿಸಿದ್ದು, ಬಾಕಿ ಒಂಬತ್ತು ಬೇಡಿಕೆಗಳನ್ನು ತಕ್ಷಣ ಪೂರೈಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದರು.

ನಗರದ ಹಾಗರಗಾ ಕ್ರಾಸ್ ಸಮೀಪದ ಸಭಾ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು? ವರದಿ ಹಾಗೂ ಆಗ್ರಹಗಳ ಪರಿಚಯ’ ಶೀರ್ಷಿಕೆಯಡಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶದಲ್ಲಿ ಒಕ್ಕೂಟದ ಮುಖಂಡರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮೈಸೂರು ಅವರು ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಜಾಬ್ ನಿರ್ಬಂಧ ಮಾತ್ರ ಹಿಂಪಡೆದಿದೆ. ಆದರೆ ಮುಸ್ಲಿಂ ಮೀಸಲಾತಿ ೪ ಪ್ರತಿಶತ ಮರುಜಾರಿ, ದ್ವೇಷ ಭಾಷಣಗಳಿಗೆ ಕಡಿವಾಣ, ಪ್ರತ್ಯೇಕ ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ವಿಷಯಗಳು, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ ಸೇರಿದಂತೆ ಬಾಕಿ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

೫೦ ಲಕ್ಷಕ್ಕೂ ಅಧಿಕ ಮತ ನೀಡಿದ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್‌ನ ಅಸಹಾಯಕತೆಗೆ ಸಾಕ್ಷಿ. ೩ ವರ್ಷದಲ್ಲಿ ೨೪ ಎಂಎಲ್ಸಿ ಸ್ಥಾನಗಳಲ್ಲಿ ಒಬ್ಬರೇ ಮುಸ್ಲಿಂರಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಅಧ್ಯಕ್ಷ ನಿವೃತ್ತ ತಹಸೀಲ್ದಾರ್ ನಿಸಾರ್ ಅಹ್ಮದ್ ವಝೀರ್ ಅವರು ಮಾತನಾಡಿ, ೨೦೨೮ರೊಳಗೆ ಬೇಡಿಕೆ ಈಡೇರದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಹ್ಯಾರೀಸ್ ಸಿದ್ದಿಕಿ ಅವರು ಮಾತನಾಡಿ, ಮೀಸಲಾತಿ ರದ್ದತಿಯಿಂದ ಪ್ರತಿ ವರ್ಷ ೧೭೦೦ ಎಂಜಿನಿಯರಿAಗ್ ವಿದ್ಯಾರ್ಥಿಗಳು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ೨೧೭ ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದ್ದರೂ ಕ್ರಮವಾಗಿಲ್ಲ ಎಂದು ಆರೋಪಿಸಿದರು.

ಸಿಖ್ ಸಮುದಾಯದ ಮುಖಂಡ ಗುರುಮಿತಸಿಂಗ್ ಸಹುಜಾ, ಹೋರಾಟಗಾರರಾದ ಇಬ್ರಾಹಿಂ ಪಟೇಲ್ ಯಾಳವಾರ್, ಸಂಘಟಕ ಅಫ್ಜಲ್ ಮಹೆಮೂದ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಸಮುದಾಯದ ಒಗ್ಗಟ್ಟು ಮತ್ತು ಹಕ್ಕುಗಳ ಬಗ್ಗೆ ಮಾತನಾಡಿದರು. ಫಿರೋಜ್ ಖಾನ್, ಅಜೀಜ್ ಅಹ್ಮದ್ ಶಾನ್, ಸಲಾಂ ಪಾಶಾ ಮನ್ನಾಖೇಳಿ ಸೇರಿದಂತೆ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Share This Article
Leave a Comment