ನೊಂದ ಕೋಲಿ ಸಮಾಜಕ್ಕೆ ನ್ಯಾಯ ಒದಗಿಸಲು ಕಮಕನೂರ್ ಅವರಿಗೆ ಪೂಣಾವಧಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ: ಡಿಗ್ಗಿ ಆಗ್ರಹ

 

ಕಲಬುರ್ಗಿ, ಮೇ.೩೧- ನೊಂದ ಸಮಾಜಕ್ಕೆ ನ್ಯಾಯ ಒದಗಿಸಲು ಹಾಗೂ ಸಮಾಜಕ್ಕೆ ಶಕ್ತಿ ತುಂಬಲು ದಣಿವರಿಯದೇ ಶ್ರಮಿಸುತ್ತಿರುವ ಕೋಲಿ ಸಮಾಜದ ಪ್ರಭಾವೀ ಮುಖಂಡ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ರಾಜ್ಯ ವಿಧಾನ ಪರಿಷತ್‌ಗೆ ಪೂರ್ಣಾವಧಿ ಸದಸ್ಯರನ್ನಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರು ಆಯ್ಕೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕೋಲಿ (ಗಂಗಾಮತ) ಸಮಾಜದ ಅಧ್ಯಕ್ಷ ಅಮೃತ್ ಎಚ್. ಡಿಗ್ಗಿ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಅಪೂರ್ಣ ಅವಧಿಗೆ ಹಾಗೂ ಇನ್ನೊಂದು ಅಪೂರ್ಣ ಅವಧಿಗೆ ಕಾಂಗ್ರೆಸ್ ಪಕ್ಷದ ಸರ್ಕಾರವು ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ರಾಜ್ಯ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದು ಸಮಾಜಕ್ಕೆ ಹೆಚ್ಚು ಅನುಕೂಲ ಆಗಿದೆ. ಅಪೂರ್ಣ ಅವಧಿಯಲ್ಲಿಯೂ ಸಹ ಸಮಾಜಕ್ಕೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕಮಕನೂರ್ ಅವರು ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲ ಬಾರಿಗೆ ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಅಲ್ಲದೇ ಅಪೂರ್ಣ ಅವಧಿಗೆ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ ಎರಡನೇ ಅವಧಿಯಲ್ಲಿಯೂ ಸಹ ಅಪೂರ್ಣ ಅವಧಿಗೆ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರ ಅವಧಿ ಇದೇ ಜೂನ್ ೩೦ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಸಮಾಜದವರಿಗೆ ತೀವ್ರ ಆತಂಕ ಉಂಟಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಪೂರ್ಣಾವಧಿ ಪರಿಷತ್ ಸದಸ್ಯತ್ವ ಕೊಡಬೇಕು ಎಂದು ಅವರು ಕೋರಿದರು.

ಅಲ್ಪಾವಧಿಯಲ್ಲಿಯೇ ಸಮಾಜದ ಕೆಲಸಗಳನ್ನು ಹಾಗೂ ಸರ್ಕಾರದ ಅನೇಕ ಕೆಲಸಗಳನ್ನು ಕಮಕನೂರ್ ಅವರು ಮಾಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಪ್ರಯತ್ನ ಮುಂದುವರೆಸಿದ್ದಾರೆ. ಈ ಕುರಿತು ಸದನದಲ್ಲಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಜೊತೆಗೆ ಕಲಬುರ್ಗಿಯಲ್ಲಿ ಈಗಾಗಲೇ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಚೌಡದಾನಪುರ ಅಭಿವೃದ್ಧಿಗೂ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

ಕೋಲಿ ಸಮಾಜದ ರ‍್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಲು ಇಲ್ಲಿಯವರೆಗೂ ಆಳಿದ ಸರ್ಕಾರಗಳಿಗೆ ಆಗಿಲ್ಲ. ಈಗ ಅಂತಹ ಕಾಲ ಕೂಡಿಬಂದಿದ್ದು, ಆಡಳಿತ ಕಾಂಗ್ರೆಸ್ ಸರ್ಕಾರದ ಬೆಂಬಲದೊAದಿಗೆ ತಿಪ್ಪಣ್ಣಪ್ಪ ಕಮಕನೂರ್ ಅವರು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಸಮಾಜವು ಸರ್ಕಾರದ ವಿರುದ್ಧ ಹೋಗದ ರೀತಿಯಲ್ಲಿ ಸಮಾಜವನ್ನು ಉತ್ತಮವಾಗಿ ನಿಯಂತ್ರಿಸಿಕೊAಡು ಹೋಗುವ ಕೆಲಸವನ್ನೂ ಕಮಕನೂರ್ ಅವರು ಮಾಡುತ್ತಿದ್ದಾರೆ. ನಮಗೆ ಬೇರೆ ಸಮುದಾಯದವರಿಂದ ಕೋಲಿ ಸಮಾಜ ಎಸ್‌ಟಿಗೆ ಸೇರಿಸುವಲ್ಲಿ ತೊಂದರೆ ಆಗುತ್ತಿದೆ. ಇಂತಹ ನೊಂದ ಸಮಾಜಕ್ಕೆ ಶಕ್ತಿಯನ್ನು ನೀಡುತ್ತಿರುವ ಕಮಕನೂರ್ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯತ್ವನ್ನು ಪೂರ್ಣಾವಧಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಜಮಾದಾರ್, ಸಂಗಮನಾಥ ಕಣ್ಣಿ, ಸುಖದೇವ್ ಕೋಗನೂರ್, ರಮೇಶ್ ಎಸ್. ಬಿದನೂರ್, ರಾಯಪ್ಪ ಹೊನಗುಂಟಿ, ದತ್ತು ಹೊನ್ನಳ್ಳಿ, ಬಸವರಾಜ್ ಬಳೂರ್ಗಿ, ಮಾಣಿಕ ಸುರಪುರ, ಜಗನ್ನಾಥ ಭೀಮನಳ್ಳಿ, ಮಲ್ಲು ವೈ. ಕೂಡಿ, ಮಲ್ಲಿಕಾರ್ಜುನ್ ಕಲ್ಲಬೇನೂರು, ಶಾಮರಾವ್ ಸುಲ್ತಾನಪೂರ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment