ಆನ್‌ಲೈನ್ ಗೇಮ್ ವ್ಯಸನದಿಂದ ತಂದೆ, ಅಕ್ಕನನ್ನು ಕೊಂದ ಪುತ್ರ

 

ಗಂಗಾವತಿ : ಆನ್‌ಲೈನ್ ಗೇಮ್‌ಗಳ ವ್ಯಸನ ಯುವಜನರನ್ನು ಎಂತಹ ಅಪಾಯದ ಅಂಚಿಗೆ ಕೊಂಡೊಯ್ಯಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ನಡೆದಿರುವ ಭೀಕರ ಘಟನೆ ಸಾಕ್ಷಿಯಾಗಿದೆ.

ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಅಕ್ಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಈ ಪೈಕಿ ತಂದೆ ಮತ್ತು ಅಕ್ಕ ಮೃತಪಟ್ಟಿದ್ದಾರೆ.

 

ತಾಲೂಕಿನ ಹೊಸ ಅಯೋಧ್ಯಾ ಗ್ರಾಮದ ಸಾಯಿ ವೆಂಕಟಮಣಿ (18) ಎಂಬಾತ ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಆತ ಸದಾ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗಳಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಬೇಸತ್ತ ಪೋಷಕರು ಗೇಮ್ ಆಡದಂತೆ ಹಲವು ಬಾರಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

 

ಶನಿವಾರ ತಡರಾತ್ರಿ ಕುಟುಂಬದವರು ಮನೆಯಲ್ಲಿ ಮಲಗಿದ್ದ ವೇಳೆ, ಕೋಪಗೊಂಡ ಸಾಯಿ ವೆಂಕಟಮಣಿ ತಂದೆ ವೆಂಕಟ ನಾಯ್ಡು (45), ತಾಯಿ ಸೌಜನ್ಯ ಹಾಗೂ ಅಕ್ಕ ಪ್ರಗತಿ (19) ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ದಾಳಿಯ ಪರಿಣಾಮ ಪ್ರಗತಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವೆಂಕಟ ನಾಯ್ಡು (45) ಅವರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 

ಗಾಯಗೊಂಡಿರುವ ಸೌಜನ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದಾಳಿ ನಡೆಸಿದ ಬಳಿಕ ಸಾಯಿ ವೆಂಕಟಮಣಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಆತನಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಗ್ರಾಮಸ್ಥರ ಮಾಹಿತಿ ಪ್ರಕಾರ, ಸಾಯಿ ವೆಂಕಟಮಣಿ ಆನ್‌ಲೈನ್ ಗೇಮ್‌ಗಳ ವ್ಯಸನಕ್ಕೆ ಒಳಗಾಗಿದ್ದನು. ಮನೆಯಿಂದ ಹೊರಗೆ ಹೆಚ್ಚು ತೆರಳದೆ, ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಗೇಮ್ ಆಡುತ್ತಲೇ ಕಳೆಯುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಹಿಂದಿನ ಪ್ರಮುಖ ಕಾರಣ ಆನ್‌ಲೈನ್ ಗೇಮಿಂಗ್ ವ್ಯಸನವೇ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹಿರಿಯ ಸದಸ್ಯ ತಾತಾರಾವ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

ಈ ಘಟನೆ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನದ ದುಷ್ಪರಿಣಾಮಗಳ ಕುರಿತು ಸಮಾಜದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪೋಷಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಗಾ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಆನ್‌ಲೈನ್ ಗೇಮಿಂಗ್ ವ್ಯಸನವು ವ್ಯಕ್ತಿಯಷ್ಟೇ ಅಲ್ಲ, ಇಡೀ ಕುಟುಂಬದ ಬದುಕನ್ನೇ ದುರಂತದತ್ತ ತಳ್ಳಬಲ್ಲದು ಎಂಬುದನ್ನು ಈ ಘಟನೆ ಕಟು ವಾಸ್ತವವಾಗಿ ತೋರಿಸಿದೆ.

Share This Article
Leave a Comment