
ಅಫಜಲಪುರ ತಾಲ್ಲೂಕು, ಜೂನ್ 1: “ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಧ್ಯೇಯವಾಕ್ಯದೊಂದಿಗೆ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಹಾಗೂ ಪಾಲಕ-ಪೋಷಕ ಶಿಕ್ಷಕರ ಮಹಾಸಭೆ ಜೇವರ್ಗಿ ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS) ಆವರಣದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪಾಲಕರು, ಗ್ರಾಮದ ಗುರುಹಿರಿಯರು, ಶಿಕ್ಷಣ ಪ್ರೇಮಿಗಳು ಹಾಗೂ ಯುವಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಶ್ರೀಕಾಂತ ಕಾಚಾಪೂರ, ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ-ಸಾಕ್ಸ್, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಬೇಯಿಸಿದ ಕೋಳಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆಯಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಕರಿಗೆ ಮನವಿ ಮಾಡಿದರು. ಅಲ್ಲದೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶರಣು ಕಣ್ಣಿ, ರಮೇಶ ಚಲಗೇರಿ, ದೇವಲು ರಾಠೋಡ್, ಶಮಶೋದ್ದಿನ್ ಹಾಗೂ ಚೌದರಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಜೇವರ್ಗಿ ಬಿ ಗ್ರಾಮದ ಸಮಸ್ತ ಗುರುಹಿರಿಯರು, ಪಾಲಕರು, ಶಿಕ್ಷಣಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಗ್ರಾಮಸ್ಥರು ಇದೇ ರೀತಿಯ ಸಹಕಾರ ಮುಂದುವರಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಮನವಿ ಮಾಡಿತು.