ಆರ್.ಆರ್. ಕಲ್ಲೂರ್ ದಂಪತಿಗಳ ಪುತ್ಥಳ ಅನಾವರಣ: ಡಾ. ಅಜಯ್ ಸಿಂಗ್ ಭಾಗಿ

 

ವಿಜಯಪುರ, ಮೇ.೨೧- ಧನವಂತರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಎಸ್. ಕಲ್ಲೂರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ, ಅವರ ತಂದೆ ಲಿಂ. ಆರ್. ಆರ್. ಕಲ್ಲೂರು ಹಾಗೂ ಲಿಂ. ಶ್ರೀಮತಿ ಮೀನಾಕ್ಷಿ ಆರ್. ಕಲ್ಲೂರು ಅವರ ಐದನೆಯ ಪುಣ್ಯಸ್ಮರಣೆ ಹಾಗೂ ಭವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಅನಾವರಣ ಸಮಾರಂಭದಲ್ಲಿ ಗುರುವಾರ ಅತ್ಯಂತ ಭಕ್ತಿಭಾವದಿಂದ ಜೇವರ್ಗಿ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಪಾಲ್ಗೊಂಡಿದ್ದರು.

ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮವು ಕಲ್ಲೂರು ದಂಪತಿಗಳ ಜನಪರ ಸೇವೆ, ರಾಜಕೀಯ ಧೀಮಂತಿಕೆ ಹಾಗೂ ಸಹಕಾರಿ ರಂಗದ ಅದ್ವಿತೀಯ ಸಾಧನೆಗಳನ್ನು ಮರುನೆನಪಿಸುವ ಸತ್ಕಾರ್ಯವಾಗಿತ್ತು. ಇದೇ ಸಂದರ್ಭಲ್ಲಿ ಡಾ. ಅಜಯ್ ಸಿಂಗ್ ಅವರು ಮಾತನಾಡಿ, ತಮ್ಮ ತಂದೆಯವರಾದ ಧರ್ಮಸಿಂಗ್ ಹಾಗೂ ಲಿಂ. ಕಲ್ಲೂರ ಅವರ ನಡುವಿನ ಬಾಂಧವ್ಯ ಮೆಲಕು ಹಾಕಿದರು.

ಸಮಾಜದ ಪ್ರಗತಿಗೆ ಕಲ್ಲೂರು ದಂಪತಿಗಳು ನೀಡಿದ ನಿಷ್ಕಲ್ಮಶ ಕೊಡುಗೆ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿ. ಆ ಮಹಾ ಚೇತನಗಳ ದಿವ್ಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಡಾ. ಅಜಯ್ ಸಿಂಗ್ ಅವರು ಪ್ರಾರ್ಥಿಸಿದರು.

ಐತಿಹಾಸಿಕ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ ಅವರ ಉಪಸ್ಥಿತಿಯೊಂದಿಗೆ, ರಾಜ್ಯದ ವಿವಿಧ ಮಠಗಳ ಪೂಜ್ಯ ಮಹಾಸ್ವಾಮಿಗಳು, ಗೌರವಾನ್ವಿತ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸದಸ್ಯರು, ಕಲ್ಲೂರು ಕುಟುಂಬದ ಹಿತೈಷಿಗಳು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿದ್ದರು.

Share This Article
Leave a Comment