ಮಾಶಾಳದಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಆರಂಭ. ಮೇ 6 ರಿಂದ 29 ವರೆಗೆ ಅದ್ದೂರಿಯಾಗಿ ಆಯೋಜನೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಸಾತಪ್ಪ ಅವುಟಗಿ ಕರೆ.

 

ಅಫಜಲಪೂರ ತಾಲೂಕಿನ ಮಾಶಾಳ (ಮಹಾಶಿವಾಲಯ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ನಡೆಯಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಾತ್ರಾ ಮಹೋತ್ಸವವು ಮೇ 6ರಿಂದ ಆರಂಭಗೊಂಡಿದ್ದು, ಮೇ 29ರವರೆಗೆ ವಿವಿಧ ಆಚರಣೆಗಳು ಜರುಗಲಿವೆ. ಮೇ 6ರಂದು ಓಂ ನಾಯಕ ಹೊರಡುವ ಕಾರ್ಯಕ್ರಮದೊಂದಿಗೆ ಜಾತ್ರೆಗೆ ಚಾಲನೆ ದೊರೆಯಿತು. ಮೇ 9ರಂದು ರಾತ್ರಿ ಅಂಕಿ ಬೀಳುವ ಹಾಗೂ ಎಣ್ಣೆ-ಅರಷಿಣ ಇಡುವ ಕಾರ್ಯಕ್ರಮ ನಡೆಯಿತು.

ಮೇ 12ರಂದು ನರಸಿಂಹ ದೇವರ ಮುಖ ತೆರೆಯುವ ಕಾರ್ಯಕ್ರಮ, ಮೇ 13ರಂದು ಚಬ್ಬ-ನಾರಾನ ವಧೆ, ಮೇ 15ರಂದು ಶ್ರೀ ಚೌಡೇಶ್ವರಿ ದೇವಿಯ ಮುಖ ತೆರೆಯುವ ಧಾರ್ಮಿಕ ವಿಧಿಗಳು ಜರುಗಿದವು . ಅದೇ ದಿನ ಪೂಜೆ, ಅರ್ಚನೆ, ನೈವೇದ್ಯದ ಬಳಿಕ ದೇವಿಯ ಥಳಿ ಆಟಗಳು ಹಾಗೂ ತವಡಿನ ಕುಂಭ ಕಾರ್ಯಕ್ರಮಗಳು ನಡೆದವು,

ಮೇ 16ರಂದು ದೇವಿಯು ಕುಂಭ ಮುಟ್ಟುವ ಕಾರ್ಯಕ್ರಮ ಜರುಗಿತು ಮೇ 17ರಿಂದ 19ರವರೆಗೆ ಹುಷಿ ಆಟಗಳು ನಡೆಯಲಿವೆ. ಮೇ 20ರಂದು ಅಗ್ಗಿ ಹಾಯುವಳು, ಮೇ 21ರಂದು ಬೀಜ ಮುಟ್ಟುವಳು ಹಾಗೂ ಮೇ 22ರಂದು ಶೂಲ ಮುಟ್ಟುವಳು ಎಂಬ ವಿಶೇಷ ಆಚರಣೆಗಳು ನಡೆಯಲಿವೆ. ನಂತರ ಹಾಗಣಗೇರರರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೇ 23ರಂದು ದೇವಿಯ ಮೆರವಣಿಗೆ ವೈಭವದಿಂದ ನಡೆಯಲಿದ್ದು, ರಾತ್ರಿ ಮಂಗಳಾರತಿ ಮೂಲಕ ಕಡೆಯ ಜಾತ್ರೆ ಸಮಾಪ್ತಿಗೊಳ್ಳಲಿದೆ. ಬಳಿಕ ಅಣುಕಿನ ಆಟ ಸೋಡಂಬಿ ಕಾರ್ಯಕ್ರಮವೂ ಜರುಗಲಿದೆ. ಮೇ 24ರಂದು ಜಂಗಿ ಪೈಲವಾನರಿಂದ ಕುಸ್ತಿ ಸ್ಪರ್ಧೆಗಳು ಹಾಗೂ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಇದೇ ವೇಳೆ, ಜೂನ್ 28ರಂದು ಹೊನ್ನಹುಗ್ಗಿಯಲ್ಲಿ ಶ್ರೀ ಚೌಡೇಶ್ವರಿ ದೇವಿಯ ಮುಖ ಮುಚ್ಚುವ ಕಾರ್ಯಕ್ರಮ ನಡೆಯಲಿದ್ದು, ಜೂನ್ 29ರಂದು ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆಗಳು ಜರುಗಲಿವೆ.

ಶ್ರೀ ಚೌಡೇಶ್ವರಿ ದೇವಿ ಟ್ರಸ್ಟ್ ಹಾಗೂ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ಸಕಲ ಭಕ್ತರು ಜಾತ್ರೆಗೆ ಆಗಮಿಸಿ ದೇವಿಯ ಕೃಪಾಶೀರ್ವಾದ ಪಡೆಯುವಂತೆ ಮುಖಂಡರಾದ ಸಾತಪ್ಪ ಅವುಟಗಿ ಹಾಗೂ ದತ್ತು ವಗ್ಗಿ ಮನವಿ ಮಾಡಿದ್ದಾರೆ.

Share This Article
Leave a Comment