ಕಲಬುರ್ಗಿ, ಮೇ.೧೨- ಬಸ್‌ನಲ್ಲಿ ಹೋಗುತ್ತಿದ್ದಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿರುವ ಸುಮಾರು ೧.೬೫ ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋದ ಘಟನೆ ವರದಿಯಾಗಿದೆ. ತಾಲ್ಲೂಕಿನ ಕೋಟನೂರು (ಡಿ) ಗ್ರಾಮದ ಶ್ರೀಮತಿ ಕಾಸಿಂಬಿ ಗಂಡ ರುಕ್ಮುದ್ದೀನ್ ಮುಲ್ಲಾ ಅವರೇ ಚಿನ್ನಾಭರಣಗಳನ್ನು ಕಳೆದುಕೊಂಡ ನತದೃಷ್ಟೆ.
ಕಳೆದ ೮ರಂದು ಅಣ್ಣನ ಮಗಳ ಮದುವೆಯಿದ್ದ ಪ್ರಯುಕ್ತ ಅಣ್ಣ ಇಸಾಮುದ್ದೀಣ್ ಜೊತೆಗೆ ಸಾವಳಗಿ (ಬಿ) ಗ್ರಾಮದಿಂದ ಬಂದಿದ್ದು, ಕಾಸಿಂಬಿ ಅವರು ಅಣ್ಣ ಹಾಗೂ ಇಬ್ಬರು ಮಕ್ಕಳೊಂದಿಗೆ ಮೇ ೬ರಂದು ಆಳಂದ್ ಚೆಕ್ ಪೋಸ್ಟ್ ಬಳಿ ಬಸ್ಸು ಹತ್ತಿದ್ದು ನೂಕು ನುಗ್ಗಲು ಆಗಿದೆ. ನಂತರ ವಿಶ್ವಾರಾಧ್ಯ ಗುಡಿಯ ಹತ್ತಿರ ವ್ಯಾನಿಟಿ ಬ್ಯಾಗ್ ನೋಡಿದಾಗ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.
ವ್ಯಾನಿಟಿ ಬ್ಯಾಗ್‌ನಲ್ಲಿದ್ದ ೭೫೦೦೦ರೂ.ಗಳ ಮೌಲ್ಯದ ೧೫ ಗ್ರಾಮ್ ತೂಕದ ಬಂಗಾರದ ನೆಕ್ಲೆಸ್, ೫೦,೦೦೦ರೂ.ಗಳ ಮೌಲ್ಯದ ೧೦ ಗ್ರಾಮ್ ತೂಕದ ಚಿನ್ನಾಭರಣ, ೨೫೦೦೦ರೂ.ಗಳ ಮೌಲ್ಯದ ೫ ಗ್ರಾಮ್ ತೂಕದ ಕಿವಿಯೋಲೆಗಳು, ೧೫೦೦೦ರೂ.ಗಳ ಮೌಲ್ಯದ ಮೂರು ಗ್ರಾಮ್ ತೂಕದ ಎರಡು ಸಣ್ಣ ಉಂಗುರುಗಳು ಸೇರಿ ಸುಮಾರು ೧.೬೫ ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಕಳವುವಾಗಿದೆ ಎಂದು ನೊಂದ ಮಹಿಳೆ ದೂರು ಸಲ್ಲಿಸಿದ್ದು, ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.