ಬೀದರ್, ಮೇ.೨೦- ಮುಸ್ಲಿಂ ಸಮುದಾಯದ ಬಕ್ರಿದ್ ಹಬ್ಬವು ಮೇ ೨೮ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಗೋಸಾಗಾಟ, ಕಾನೂನು ಬಾಹಿರ ಗೋಹತ್ಯೆ ತಡೆಗಟ್ಟಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ತಕ್ಷಣ ವಿಶೇಷ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ಬಜರಂಗ ದಳ ಬೀದರ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಬಕ್ರಿದ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋವು, ಎಮ್ಮೆ ಹಾಗೂ ಕರುಗಳ ಸಾಗಾಟ ಮತ್ತು ಕಾನೂನು ಬಾಹಿರ ಗೋಹತ್ಯೆ ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮತ್ತು ಗೋಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ, ಕೆಲವು ಕಡೆಗಳಲ್ಲಿ ರಸ್ತೆ ಬದಿ, ಜನವಸತಿ ಪ್ರದೇಶಗಳು ಹಾಗೂ ತಾತ್ಕಾಲಿಕ ಶೆಡ್ಡುಗಳಲ್ಲಿ ಕಾನೂನು ಉಲ್ಲಂಘಿಸಿ ಗೋಹತ್ಯೆ ನಡೆಯುತ್ತಿರುವ ಬಗ್ಗೆ ಈ ಹಿಂದೆ ದೂರುಗಳು ಬಂದಿವೆ ಎಂದು ಅವರು ಉಲ್ಲೇಖಿಸಿದರು.
ಇಂತಹ ಘಟನೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದರ ಜೊತೆಗೆ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ. ಬಕ್ರಿದ್ ಅವಧಿಯಲ್ಲಿ ರಾಜ್ಯಾದ್ಯಂತ ಅಕ್ರಮ ಗೋಹತ್ಯೆ ಹಾಗೂ ಗೋಸಾಗಾಟ ತಡೆಯಲು ವಿಶೇಷ ಪೊಲೀಸ್ ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲೆಗಳ ಗಡಿಭಾಗಗಳಲ್ಲಿ ೨೪ ಗಂಟೆಗಳ ವಿಶೇಷ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಪಶು ಸಾಗಾಟಕ್ಕೆ ಸಂಬAಧಿಸಿದ ದಾಖಲೆಗಳು, ಪರವಾನಗಿಗಳು ಹಾಗೂ ಕಾನೂನುಬದ್ಧ ಸಾಗಾಟ ನಿಯಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ರಸ್ತೆ ಬದಿ, ಜನವಸತಿ ಪ್ರದೇಶಗಳು ಹಾಗೂ ತಾತ್ಕಾಲಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಗೋಹತ್ಯೆಗೆ ಅವಕಾಶ ನೀಡಬಾರದು. ಅಕ್ರಮ ಗೋಸಾಗಾಟ, ಗೋಹತ್ಯೆ ಹಾಗೂ ಕಾನೂನು ಉಲ್ಲಂಘನೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಆಡಳಿತಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ವಿಶೇಷ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಾಮಾಜಿಕ ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಜರಂಗ ದಳ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ ವೆಂಕಟೇಶ ಶಾಲಿ ಚಿದ್ರಿ, ಉಪಾಧ್ಯಕ್ಷ ವಸಂತ ಸುಭಾಂಜೆ, ಪ್ರಧಾನ ಕಾರ್ಯದರ್ಶಿ ಸಂದೀಪ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಆರ್ಯ, ಜಿಲ್ಲಾ ಉಪಾಧ್ಯಕ್ಷ ಧನರಾಜ ಪಾಂಡ್ರೆ, ಚಿಟಗುಪ್ಪಾ ತಾಲ್ಲೂಕಾಧ್ಯಕ್ಷ ಮಾಣಿಕ್ ಮನ್ನಾಏಖೇಳ್ಳಿ ಸೇರಿದಂತೆ ಶಿವಾನಂದ ಮಾಲೆಗಾಂವ್, ಮಲ್ಲಪ್ಪ ಶರಗರ ಕೋಲಾರ್, ವಿಠಲ್ ಮರ್ಜಾಪುರ್ ಹಾಗೂ ಬಾಬುಗಿರಿ ಪ್ರಕಾಶ ಪಾಂಡ್ರೆ ಉಪಸ್ಥಿತರಿದ್ದರು.