ಬೀದರ್, ಮೇ.೧೧- ಸಮಾಜಮುಖಿ ಸುದ್ದಿಗಳ ಪ್ರಸಾರಕ್ಕೆ ಮಾಧ್ಯಮಗಳು ಒತ್ತು ನೀಡಬೇಕು ಎಂದು ವಕ್ತಾರ ಕೃಷ್ಣ ಜೋಶಿ ಅವರು ಹೇಳಿದರು.
ಕೇಶವ ಕಾರ್ಯ ಸಂವರ್ಧನ ಸಮಿತಿ ವತಿಯಿಂದ ನಗರದಲ್ಲಿ ಜರುಗಿದ ನಾರದ ಜಯಂತಿ ಕಾರ್ಯಕ್ರಮದಲ್ಲಿ ನಾರದ ಮಹರ್ಷಿಗಳ ವ್ಯಕ್ತಿತ್ವ ಹಾಗೂ ಮಾಧ್ಯಮ ಕ್ಷೇತ್ರದ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದ ಅವರು, ತ್ರಿಲೋಕ ಸಂಚಾರಿಯಾಗಿದ್ದ ಮಹರ್ಷಿ ನಾರದರು ಲೋಕಕಲ್ಯಾಣಕ್ಕಾಗಿ ಎಲ್ಲೆಡೆ ಸುದ್ದಿಯನ್ನು ತಲುಪಿಸುವ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು. ಸಾಮಾನ್ಯವಾಗಿ ನಾರದರನ್ನು “ಕಲಹಪ್ರಿಯ” ಎಂದು ಅರ್ಥೈಸಿಕೊಳ್ಳಲಾಗುತ್ತದಾದರೂ, ಅವರು ಧರ್ಮ ಸಂಸ್ಥಾಪನೆಗಾಗಿ ಸತ್ಯಸುದ್ದಿಗಳನ್ನು ಹರಡುವ ಕಾರ್ಯ ಮಾಡುತ್ತಿದ್ದರು ಎಂದು ತಿಳಿಸಿದರು.
೧೮ ಪುರಾಣಗಳಲ್ಲಿ ಒಂದಾದ ನಾರದಪುರಾಣದಲ್ಲಿ ಮಾಧ್ಯಮಗಳ ಜವಾಬ್ದಾರಿಗಳ ಕುರಿತು ಮಹತ್ವದ ವಿಚಾರಗಳು ಉಲ್ಲೇಖಗೊಂಡಿವೆ. ನಾರದರು ನೀಡಿದ ೮೪ ಭಕ್ತಿ ಸೂತ್ರಗಳಲ್ಲಿ ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ತಲುಪಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ಮಾರ್ಗದರ್ಶನವಿದೆ. ೧೮೨೬ರಲ್ಲಿ ಆರಂಭವಾದ ಭಾರತದ ಮೊದಲ ಪತ್ರಿಕೆ “ಉದ್ಧಂತ ಮಾರ್ತಂಡ” ಪತ್ರಿಕೆಯ ಸಂಪಾದಕೀಯದಲ್ಲಿಯೂ ನಾರದ ಮಹರ್ಷಿಗಳ ಉಲ್ಲೇಖವಿದ್ದು, ಮೇ ೩೦ರಂದು ನಾರದ ಜಯಂತಿಯ ದಿನವೇ ಆ ಪತ್ರಿಕೆ ಆರಂಭಗೊAಡಿತ್ತು ಎಂದು ಅವರು ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಲ್ಲ ಕ್ಷೇತ್ರಗಳ ಮಾಹಿತಿಗಳು ಲಭ್ಯವಾಗುತ್ತವೆ. ಆದ್ದರಿಂದ ಪ್ರಕೃತಿಗೆ ಪೂರಕವಾಗಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಸುದ್ದಿಗಳನ್ನು ಪ್ರಸಾರ ಮಾಡುವುದು ಇಂದಿನ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಲಹ ಹುಟ್ಟಿಸುವ ಸುದ್ದಿಗಳ ಬದಲು ಜನರನ್ನು ಒಗ್ಗೂಡಿಸುವ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಚನ್ನಬಸವ ಮೊಕ್ತೆದಾರ್ ಅವರು ಮಾತನಾಡಿ, ನಮ್ಮ ಮೇಲಿನ ಅಪಾರ ಗೌರವದಿಂದ ನಮ್ಮ ಹೆಸರಿನಲ್ಲಿ ನಾರದ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯ” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆಯನ್ನು ನಾಗೇಶ್ ಚಿನ್ನಾರೆಡ್ಡಿ ವಹಿಸಿದ್ದರು. ವಿಭಾಗ ಸಂಘ ಚಾಲಕ ಹನುಮಂತರಾವ್ ಪಾಟೀಲ್, ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ್ ಸೇರಿದಂತೆ ನಗರದ ಹಲವು ಗಣ್ಯರು ಉಪಸ್ಥಿತರಿದ್ದರು. ಶಿವಕಾಂತ್ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಪಂಚಾಳ್ ಅವರು ಸ್ವಾಗತಿಸಿ, ಪರಿಚಯಿಸಿದರು. ಎನ್. ಕೃಷ್ಣಾರೆಡ್ಡಿ ಅವರು ವಂದಿಸಿದರು.