ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ಹೆಮ್ಮಡಗಾ ಅರಣ್ಯದಲ್ಲಿ ದಾರಿ ತಪ್ಪಿದ್ದ 65 ವರ್ಷದ ರೈತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಹೆಮ್ಮಣ್ಣ ಮದಾರ್ (65) ಅವರು ಜೂನ್ 11ರಂದು ಜಾನುವಾರುಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಆದರೆ ರಾತ್ರಿ ವೇಳೆಗೆ ಜಾನುವಾರುಗಳು ಮಾತ್ರ ಮನೆಗೆ ಮರಳಿದ್ದು, ರೈತರು ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬದವರು ಆತಂಕಗೊಂಡಿದ್ದರು.
ತಕ್ಷಣವೇ ಕುಟುಂಬ ಸದಸ್ಯರು ಅರಣ್ಯ ವಲಯಾಧಿಕಾರಿ ಎಸ್.ಎಸ್. ನದಾಫ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಾಲದ್ ಅವರಿಗೆ ವಿಷಯ ತಿಳಿಸಿದ್ದು, ಅವರ ನಿರ್ದೇಶನದ ಮೇರೆಗೆ ವಿಶೇಷ ರಕ್ಷಣಾ ತಂಡಗಳನ್ನು ರಚಿಸಲಾಯಿತು.
ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ, ಕಾಡಿನಲ್ಲಿ ದಾರಿ ತಪ್ಪಿದ್ದ ರೈತನನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ರಕ್ಷಿಸಿದರು.
ರೈತನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಬಳಿಕ ಅವರನ್ನು ಕುಟುಂಬ ಸದಸ್ಯರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ, ತ್ವರಿತ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಯ ಪ್ರಯತ್ನದಿಂದ ದಾರಿ ತಪ್ಪಿದ್ದ ವೃದ್ಧ ರೈತನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ಸು ದೊರೆತಿದೆ.