ರಂಜೋಳಖೇಣಿಯಲ್ಲಿ ಶಾಲಾ ಉದ್ಯಾನವನ ಉದ್ಘಾಟನೆ: ಸುಂದರ ವಾತಾವರಣ ನಿರ್ಮಾಣಕ್ಕೆ ಶಾಸಕರ ಶ್ಲಾಘನೆ.

 

ಬೀದರ್, ಮೇ.೬: ತಾಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಉದ್ಯಾನವನ ಉದ್ಘಾಟನೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಭಾನುವಾರ ನೆರವೇರಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು, ಶಾಲೆಯೊಳಗೆ ಪ್ರವೇಶಿಸಿದಾಗ ಉದ್ಯಾನವನದಂತೆಯೇ ಭಾಸವಾಗುವಂತಹ ಸುಂದರ ವಾತಾವರಣ ನಿರ್ಮಾಣಗೊಂಡಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಹಳೆಯ ಗೋಡೆಗಳಿಗೆ ಹೊಸ ಜೀವ ತುಂಬಿದ ಚಿತ್ರಕಲೆ ಶಿಕ್ಷಕ ವಿಷ್ಣುಕಾಂತ ಠಾಕುರ್ ಅವರ ಸೃಜನಾತ್ಮಕ ಕಾರ್ಯವನ್ನು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಹಾಗೂ ಸ್ಪಷ್ಟ ಗುರಿಯೊಂದಿಗೆ ಮುಂದುವರಿದರೆ ಉನ್ನತ ಸಾಧನೆ ಸಾಧ್ಯವೆಂದು ತಿಳಿಸಿದರು. ಭವಿಷ್ಯದ ಗುರಿಗಳನ್ನು ನಿಗದಿಪಡಿಸಿಕೊಂಡು ನಿರಂತರವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಕರ ಪರಿಶ್ರಮ ಹಾಗೂ ಪಾಲಕರ ಬೆಂಬಲ ಪ್ರಮುಖ ಕಾರಣವೆಂದು ತಿಳಿಸಲಾಯಿತು. ಇದೇ ವೇಳೆ ಶಾಲೆಯ ಸುಂದರೀಕರಣ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರನ್ನು ಗೌರವಿಸಲಾಯಿತು.

ಮುಖ್ಯಗುರು ಮಂಜುನಾಥ ಎನ್.ಆರ್. ಅವರು ಮಾತನಾಡಿ, ಶಾಲೆಯ ಸಾಧನೆಗೆ ಶಿಕ್ಷಕರ ಸಮರ್ಪಿತ ಸೇವೆ ಹಾಗೂ ಪಾಲಕರ ಸಹಕಾರವೇ ಪ್ರಮುಖ ಕಾರಣವಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ತರುವ ದಿಟ್ಟ ನಿಲುವು ಹೊಂದಿದ್ದೇವೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮದರ್ ಖಾನ್ ಅವರು ಶಿಕ್ಷಕರ ಕೊರತೆಯ ನಡುವೆಯೂ ಶಾಲೆ ಉತ್ತಮ ಫಲಿತಾಂಶ ಸಾಧಿಸಿರುವುದನ್ನು ಶ್ಲಾಘಿಸಿ, ಮುಂದೆಯೂ ಇದೇ ರೀತಿಯ ಶ್ರಮ ಮುಂದುವರಿಸಲು ಸೂಚಿಸಿದರು.

ಕಾರ್ಯಕ್ರಮದಲ್ಲಿ ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಝಾಕೀರ್ ಹುಸೇನ್, ಡಯಟ್ ಉಪನ್ಯಾಸಕರಾದ ಸಂತೋಷ್ ಪುಜಾರಿ ಹಾಗೂ ಗೀತಾ ಗಡ್ಡಿ, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕರು, ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸತ್ಯನಾರಾಯಣ ಹಾಗೂ ರೇಖಾ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿಷ್ಣುಕಾಂತ ಠಾಕುರ್ ಸ್ವಾಗತಿಸಿದರು. ಸಚಿನ್ ವಂದಿಸಿದರು.

Share This Article
Leave a Comment