
ಕಾರವಾರ, ಏಪ್ರಿಲ್ 23: ಪರೀಕ್ಷೆಗೆ ಹಾಜರಾಗಿದ್ದರೂ ‘ಹಾಜರಾಗಿಲ್ಲ’ ಎಂದು ದಾಖಲಿಸಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ಅನ್ಯಾಯವಾಗಿ ಫೇಲ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ದೋಷಪೂರಿತ ನಿರ್ವಹಣೆಯನ್ನು ಬಯಲಿಗೆಳೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಿರಸಿ ನಗರದ ಇಂದಿರಾ ನಗರದಲ್ಲಿರುವ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಅಂಧರಾಗಿದ್ದು, ನಿಯಮಾನುಸಾರ ಗಣಿತ ಮತ್ತು ವಿಜ್ಞಾನ ವಿಷಯಗಳಿಂದ ವಿನಾಯಿತಿ ಪಡೆದಿದ್ದಳು. ಅದರ ಬದಲಿಗೆ ಪೊಲಿಟಿಕಲ್ ಸೈನ್ಸ್ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
ಲೀಸಾ ಎಲ್ಲಾ ಪರೀಕ್ಷೆಗಳಿಗೆ ಹಾಜರಾಗಿದ್ದು, ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯನ್ನೂ ಬರೆದಿದ್ದಾಳೆ. ಆದರೆ ಫಲಿತಾಂಶ ಪ್ರಕಟವಾದಾಗ ಆ ವಿಷಯಕ್ಕೆ ‘ಅಬ್ಸೆಂಟ್’ ಎಂದು ನಮೂದಿಸಿರುವುದು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿ ಉರ್ದು – 124, ಕನ್ನಡ – 100, ಇಂಗ್ಲಿಷ್ – 92, ಅರ್ಥಶಾಸ್ತ್ರ – 98, ಪೊಲಿಟಿಕಲ್ ಸೈನ್ಸ್ – 92 ಅಂಕಗಳನ್ನು ಗಳಿಸಿ ಒಟ್ಟು 526 ಅಂಕಗಳೊಂದಿಗೆ 84.16% ಸಾಧನೆ ಮಾಡಿದ್ದರೂ, ಒಂದೇ ವಿಷಯದಲ್ಲಿ ‘ಅಬ್ಸೆಂಟ್’ ಎಂದು ದಾಖಲಾಗಿರುವ ಕಾರಣಕ್ಕೆ ಆಕೆಯನ್ನು ಫೇಲ್ ಎಂದು ಘೋಷಿಸಲಾಗಿದೆ.
“ಅಂಧತ್ವ ಇದ್ದರೂ ಕಷ್ಟಪಟ್ಟು ಕೇಳಿಸಿಕೊಂಡು ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದೇನೆ. ಆದರೂ ನನಗೆ ಅನ್ಯಾಯವಾಗಿದೆ,” ಎಂದು ವಿದ್ಯಾರ್ಥಿನಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ.
ಈ ಸಂಬಂಧ ಅಗತ್ಯ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದ್ದು, ತಕ್ಷಣದ ಕ್ರಮ ಕೈಗೊಂಡು ದೋಷವನ್ನು ಸರಿಪಡಿಸಬೇಕೆಂದು ಪೋಷಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಘಟನೆ ಪರೀಕ್ಷಾ ಮೌಲ್ಯಮಾಪನ ಹಾಗೂ ದಾಖಲೆ ನಿರ್ವಹಣೆಯಲ್ಲಿನ ತಪ್ಪುಗಳ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದು, ಶಿಕ್ಷಣ ಇಲಾಖೆಯ ಜವಾಬ್ದಾರಿತನದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.