ಗೋದುತಾಯಿ ಕಾಲೇಜು ವಿದ್ಯಾರ್ಥಿನಿಯರಿಂದ ವಿಶ್ವಪಾರಂಪರಿಕ ನಡಿಗೆ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಜಾಗೃತಿ ಮೂಡಿಸಿದ ವಿದ್ಯಾರ್ಥಿನಿಯರು

ಕಲಬುರಗಿ, ಏ.೧೮: ವಿಶ್ವಪಾರಂಪರಿಕ ದಿನಾಚರಣೆ ಅಂಗವಾಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರು ವಿಶ್ವಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಶನಿವಾರ ಬೆಳಗ್ಗೆ ಮಹಾವಿದ್ಯಾಲಯ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬಿಬಿಎ ಟೂರಿಸಮ್ ಮತ್ತು ಟ್ರಾವೆಲ್ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಈ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಶರಣಬಸವೇಶ್ವರ ದೇವಸ್ಥಾನದಿಂದ ಬಹುಮನಿ ಕೋಟೆಯವರೆಗೆ ವಿದ್ಯಾರ್ಥಿನಿಯರು ಪಾದಯಾತ್ರೆ ನಡೆಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸೀಮಾ ಪಾಟೀಲ್ ಮಾತನಾಡಿ, ಪಾರಂಪರಿಕ ಸ್ಮಾರಕಗಳು ನಮ್ಮ ಪೂರ್ವಿಕರಿಂದ ನಮಗೆ ದೊರೆತ ಅಮೂಲ್ಯ ಆಸ್ತಿಗಳಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ಪ್ರಾಧ್ಯಾಪಕ ಡಾ. ಶಂಭುಲಿಂಗ ವಾಣಿ ಅವರು ಕಲಬುರಗಿ ಕೋಟೆ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳ ಮಹತ್ವವನ್ನು ವಿವರಿಸಿ, ಇವುಗಳ ಸಂರಕ್ಷಣೆಗೆ ಯುವಜನರ ಪಾತ್ರ ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕಿ ಡಾ. ರಾಜಲಕ್ಷ್ಮಿ, ಇತಿಹಾಸ ವಿಭಾಗದ ಮುಖ್ಯಸ್ಥ ಸಂತೋಷ್ ಪೂಜಾರಿ, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪಂಡಿತ್ ಬಿ. ಮದುಗುಣಕಿ ಸೇರಿದಂತೆ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Share This Article
Leave a Comment