ಬೀದರ್‌ನಲ್ಲಿ ಏಪ್ರಿಲ್ ೨೧ರಂದು ಶ್ರೀ ಶಂಕರಾಚಾರ್ಯರ ಜಯಂತೋತ್ಸವ

ಭಕ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೀದರ್, ಏ.೧೮: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ ೨೧ರಂದು ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಸಿದ್ಧತೆಗಳು ಜೋರಾಗಿದೆ. ನಗರದ ಪೂಜ್ಯ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಂಜೆ ೪.೩೦ಕ್ಕೆ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಗರದ ರಾಘವೇಂದ್ರ ಮಠದಲ್ಲಿ ಸಮಾಜದ ಹಿರಿಯರು ಹಾಗೂ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ ಮಾತನಾಡಿ, ಜಯಂತಿ ದಿನ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರ ಪೂಜೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಂತರ ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಕುಲಕರ್ಣಿ ಮಾತನಾಡಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ ೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ. ವೇದಿಕೆ ಕಾರ್ಯಕ್ರಮದ ನಂತರ ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಮಿಲಿಂದ ಆಚಾರ್ಯ, ಸತೀಶ್ ಕುಲಕರ್ಣಿ, ಉಪೇಂದ್ರ ದೇಶಪಾಂಡೆ, ಭೀಮಸೇನರಾವ್ ಕನ್ನಿಹಾಳ, ರಾಮರಾವ್ ಕುಲಕರ್ಣಿ, ಅಪ್ಪಾರಾವ್ ಸೌದಿ, ಸುನೀಲ್ ಕುಲಕರ್ಣಿ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಂಚಾಲಕ ರಾಜೇಶ್ ಕುಲಕರ್ಣಿ ವಂದಿಸಿದರು.

ಜಯಂತೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳು ಏಪ್ರಿಲ್ ೨೦ರ ಸಂಜೆ ೬ ಗಂಟೆಯೊಳಗೆ ತಮ್ಮ ವಿವರಗಳನ್ನು ಸಮಿತಿಗೆ ಸಲ್ಲಿಸಲು ಮನವಿ ಮಾಡಲಾಗಿದೆ.

Share This Article
Leave a Comment