ಬೀದರ್, ಏ.೧೮: ಆಧಿ-ವ್ಯಾಧಿಗಳಿಂದ ದೂರ ಉಳಿದು ನೆಮ್ಮದಿಯ ಬದುಕು ಸಾಗಿಸಲು ಶಿವಯೋಗವು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದ್ದು, ಇಷ್ಟಲಿಂಗ ಪೂಜೆ ಮಾನಸಿಕ ಶಾಂತಿ ಹಾಗೂ ದೈಹಿಕ ಆರೋಗ್ಯಕ್ಕೆ ಮಹತ್ತರವಾದ ಸಹಾಯ ಮಾಡುತ್ತದೆ ಎಂದು ಅನುಭಾವಿ ಶರಣೆ ಸುವರ್ಣಾ ಶರಣಪ್ಪ ಚಿಮಕೊಡೆ ತಿಳಿಸಿದ್ದಾರೆ.
ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಡಾ. ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಲಾದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಅನುಭಾವ ನಿವೇದನೆ ನೀಡಿದ ಅವರು, ಇಷ್ಟಲಿಂಗವು ವೈಜ್ಞಾನಿಕ ಪರಿಕಲ್ಪನೆಯಾಗಿದ್ದು, ಜಾತಿ, ಮತ, ಪಂಥ, ವರ್ಗಭೇದಗಳನ್ನೆಲ್ಲ ಮೀರಿ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಇದ್ದ ತಾರತಮ್ಯವನ್ನು ನಿವಾರಿಸಲು ಶರಣರು ಎಡಗೈಯಲ್ಲಿ ಇಷ್ಟಲಿಂಗ ಧಾರಣೆ ಮಾಡುವ ಸಂಪ್ರದಾಯವನ್ನು ರೂಪಿಸಿದ್ದು, ಇದರಲ್ಲಿ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಅರ್ಥ ಅಡಕವಾಗಿದೆ ಎಂದು ವಿವರಿಸಿದರು. ಇಷ್ಟಲಿಂಗವನ್ನು ಎಡಗೈಯಲ್ಲಿ ಹಿಡಿದು ಏಕಾಗ್ರ ದೃಷ್ಟಿಯಿಂದ ಧ್ಯಾನ ಮಾಡುವುದರಿಂದ ದೇಹದಲ್ಲಿ ಚೈತನ್ಯ ಸಂಚಲನ ಉಂಟಾಗಿ, ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಅವರು ಹೇಳಿದರು.
ಈ ವಿಧಾನವು ದೃಷ್ಟಿಯೋಗದ ಒಂದು ರೂಪವಾಗಿದ್ದು, ನಿಯಮಿತವಾಗಿ ಅಭ್ಯಾಸ ಮಾಡಿದರೆ ಮಾನಸಿಕ ಅಶಾಂತಿ ದೂರವಾಗಿ ಆರೋಗ್ಯ ಸುಧಾರಿಸುತ್ತದೆ. ಅಷ್ಟಸಂಕಲ್ಪ ಸಿದ್ಧಿಯಾಗುವ ಮೂಲಕ ವ್ಯಕ್ತಿಯ ಜೀವನದಲ್ಲಿ ಸದ್ಫಲಿತಾಂಶಗಳು ಕಂಡುಬರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂದಿನ ಯುವಜನರು ಅನೇಕ ಅಪ್ರಯೋಜಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಶಿವಯೋಗದಂತಹ ಸರಳ ಸಾಧನೆಯತ್ತ ಮುಖ ಮಾಡಿದರೆ ಜೀವನದಲ್ಲಿ ಉತ್ತಮ ಬದಲಾವಣೆ ಕಾಣಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಗಂಗಾಂಬಿಕೆ ಅಕ್ಕ ಅವರು ಇಷ್ಟಲಿಂಗ ಸಾಧನೆಯ ಪ್ರಾತ್ಯಕ್ಷಿಕೆಯನ್ನು ನೀಡುತ್ತ, ದಿನವೂ ಕನಿಷ್ಠ ಮೂರು ನಿಮಿಷಗಳಿಂದ ಗರಿಷ್ಠ ಇಪ್ಪತ್ತೊಂದು ನಿಮಿಷಗಳವರೆಗೆ ಲಿಂಗಧ್ಯಾನ ಮಾಡಿದರೆ ಆರೋಗ್ಯದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು ಎಂದು ತಿಳಿಸಿದರು. ಈ ಸಾಧನೆಗೆ ಯಾವುದೇ ಹೆಚ್ಚಿನ ವೆಚ್ಚ ಅಥವಾ ಪೂಜಾರಿ ಅವಶ್ಯಕತೆ ಇಲ್ಲದೆ ಪ್ರತಿಯೊಬ್ಬರೂ ಸ್ವತಃ ಆಚರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ದೇವಕಿ ಅಶೋಕ ನಾಗೂರೆ ಮಾತನಾಡಿ, ಬಸವಣ್ಣ ಮತ್ತು ಶರಣರು ವಚನಗಳ ಮೂಲಕ ನೀಡಿದ ಈ ಸಾಧನೆಯ ಮಹತ್ವವನ್ನು ಎಲ್ಲರೂ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಷಾ ಮಿರ್ಚೆ, ರತ್ನಾ ಪಾಟೀಲ್, ಸಂತೋಷಿ ಗಂದಗೆ, ಶೀಲಾವತಿ ಶೀಲವಂತ, ಶಕುಂತಲಾ ಬೆಲ್ದಾಳೆ, ನೀತು ಬೆಲ್ದಾಳೆ, ಕಲ್ಪನಾ ಸಾವಲೆ, ಲಕ್ಷ್ಮಿ ಬಿರಾದಾರ್, ಶಾಂತಾ ಖಂಡ್ರೆ, ನೀಲಮ್ಮ ರೂಗನ್, ಭಾಗ್ಯವತಿ ಮುದ್ದಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬೆಳಿಗ್ಗೆ ನೂರಾರು ಶರಣ-ಶರಣೆಯರು ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ. ವಿದ್ಯಾವತಿ ಬಲ್ಲೂರು ನಿರೂಪಿಸಿದರು. ಜ್ಞಾನದೇವಿ ಬಬಛಡೆ ಸ್ವಾಗತಿಸಿದರು ಹಾಗೂ ಕರುಣಾ ಶಟಕಾರ್ ವಂದಿಸಿದರು.