ಕಲಬುರಗಿ, ಜೂ. 5: ನೈಜ ಕಟ್ಟಡ ಕಾರ್ಮಿಕನ ಪಿಂಚಣಿ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿ ಕಾರ್ಮಿಕನ ಹಕ್ಕಿಗೆ ಧಕ್ಕೆ ಉಂಟು ಮಾಡಿರುವ ಸಂಬಂಧಿತ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಅರ್ಜಿಯನ್ನು ಮರುಪರಿಶೀಲಿಸಿ ಪುರಸ್ಕರಿಸಬೇಕೆಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (KSCWCU/NCL) ಕಲಬುರಗಿ ಜಿಲ್ಲಾ ಸಮಿತಿಯು ಉಪ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಅರಳಗುಂಡಗಿ ಗ್ರಾಮದ ನಿವಾಸಿ ಹಾಗೂ ಸಂಘದ ಸದಸ್ಯರಾದ ಸುಭಾಷ್ ತಂದೆ ಶರಣಪ್ಪ ಉಪ್ಪಾರ ಅವರು ಕಳೆದ ಸುಮಾರು 30 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗೌಂಡಿ ಕೆಲಸ ನಿರ್ವಹಿಸುತ್ತಿದ್ದು, 2017ರಲ್ಲಿ ಸೇವಾಸಿಂಧು ಮೂಲಕ ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ್ ಪಡೆದಿದ್ದಾರೆ. ಅಂದಿನಿಂದ ನಿರಂತರವಾಗಿ ಕಾರ್ಡ್ ನವೀಕರಣ ಮಾಡಿಕೊಂಡು ಇ-ಕಾರ್ಡ್ ಕೂಡ ಪಡೆದಿದ್ದು, ಮಂಡಳಿಯ ನಿಯಮಾನುಸಾರ ಕಾರ್ಡ್ ಚಾಲ್ತಿಯಲ್ಲಿದೆ ಎಂದು ಸಂಘ ತಿಳಿಸಿದೆ.
60 ವರ್ಷ ವಯಸ್ಸು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಭಾಷ್ ಉಪ್ಪಾರ ಅವರು ಪಿಂಚಣಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪರಿಶೀಲನೆ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಕೇಂದ್ರದ ಸಿಬ್ಬಂದಿ ಹಾಗೂ ಕಾರ್ಮಿಕ ಇಲಾಖೆಯ ಡಿಇಒ ಅವರು ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವರು ನೈಜ ಕಟ್ಟಡ ಕಾರ್ಮಿಕರೆಂದು ವರದಿ ನೀಡಿದ್ದರು. ಆದಾಗ್ಯೂ, ಎಎಲ್‌ಸಿ ಕಚೇರಿಯ ಕಾರ್ಯನಿರ್ವಾಹಕ ಸಿಬ್ಬಂದಿ ಯಾವುದೇ ಸಮಗ್ರ ತನಿಖೆ ನಡೆಸದೆ ಹಾಗೂ ಕೆಎಸ್‌ಕೆ ಮತ್ತು ಡಿಇಒ ವರದಿಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ “ನಕಲಿ ಲೇಬರ್ ಕಾರ್ಡ್” ಎಂದು ಘೋಷಿಸಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಸಂಘ ಆರೋಪಿಸಿದೆ.
ಈ ಕ್ರಮವು ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿದ್ದು, ನೈಜ ಕಾರ್ಮಿಕರ ಹಕ್ಕುಗಳನ್ನು ದಮನಿಸುವಂತಿದೆ ಹಾಗೂ ಇಲಾಖೆಗೆ ಕೆಟ್ಟ ಹೆಸರು ತರುವಂತಾಗಿದೆ ಎಂದು ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘವು ತನ್ನ ಮನವಿಯಲ್ಲಿ, “ಕಾರ್ಡ್ ನಕಲಿಯೆಂದಾದರೆ ಅದನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ, ಯಾವ ತಂತ್ರಾಂಶದ ಮೂಲಕ ಪರಿಶೀಲಿಸಲಾಗಿದೆ, ನಕಲಿ ಕಾರ್ಡ್ ವಿರುದ್ಧ ಮೇಲ್ಮನವಿ ಸಲ್ಲಿಸಲು ವೆಬ್‌ಸೈಟ್‌ನಲ್ಲಿ ಅವಕಾಶ ಏಕೆ ಇಲ್ಲ ಹಾಗೂ ಮಂಡಳಿಯಿಂದಲೇ ವರ್ಷಗಳಿಂದ ನವೀಕರಣಗೊಂಡ ಕಾರ್ಡ್ ಅನ್ನು ಈಗ ನಕಲಿ ಎಂದು ಹೇಗೆ ಘೋಷಿಸಲಾಗಿದೆ” ಎಂಬ ಪ್ರಶ್ನೆಗಳನ್ನು ಎತ್ತಿದೆ.
ಸಂಧ್ಯಾಕಾಲದ ಜೀವನದಲ್ಲಿರುವ ಬಡ ಕಟ್ಟಡ ಕಾರ್ಮಿಕನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅರ್ಜಿಯನ್ನು ಮರುಪರಿಶೀಲಿಸಿ ಪಿಂಚಣಿ ಮಂಜೂರು ಮಾಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಜಿಲ್ಲಾಧ್ಯಕ್ಷ ಮಹ್ಮದ್ ಮೋಸಿನ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಬಿ.ಕೆ. ಸುಂಬಡ್ ಸೇರಿದಂತೆ ಹಲವು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.