ಕಲಬುರಗಿ : ಕನ್ನಡ ಸಾಹಿತ್ಯವು ಬಹು ವಿಶಾಲವಾದ ಪರಂಪರೆಯನ್ನು ಹೊಂದಿದ್ದು, ಜನಪದ ಕಾವ್ಯದಿಂದ ಆರಂಭವಾಗಿ ಶ್ರೀವಿಜಯನ ಕವಿರಾಜಮಾರ್ಗ, ವಡ್ಡಾರಾಧನೆ, ಪಂಪ, ಪೊನ್ನ, ನಾಗಚಂದ್ರ, ಲಕ್ಷ್ಮೀಶ, ಅಂಬಲಗಿ ಚನ್ನಮಲ್ಲ, ವಚನಕಾರರು, ದಾಸರು, ತತ್ವಪದಕಾರರು ಹಾಗೂ ಸೂಫಿ ಸಂತರು ರೂಪಿಸಿದ ಸೌಹಾರ್ದ ಮತ್ತು ಸಾಮರಸ್ಯದ ಸಾಹಿತ್ಯವೇ ಕನ್ನಡ ಸಾಹಿತ್ಯದ ಮಹತ್ವವಾಗಿದೆ ಎಂದು ಹಿರಿಯ ಸಾಹಿತಿ ರಾಜೇಂದ್ರ ಎಂ. ಕೊರಬ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ, ಕಲಬುರಗಿ ಇವರ ಸಹಯೋಗದಲ್ಲಿ ನಗರದ ರೋಜಾ ತೈನ್ ಪಾಚಾಪೂರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಚಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಜೀವನೋತ್ಸಾಹ ತುಂಬುವ ಶಕ್ತಿಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಕನ್ನಡವನ್ನು ಕಲಿತು ಪ್ರೀತಿ, ಮಮತೆ ಮತ್ತು ವಾತ್ಸಲ್ಯ ಬೆಳೆಸಿಕೊಳ್ಳಬೇಕು. ಜೊತೆಗೆ ಇತರ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನವನ್ನೂ ಮಾಡಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಕರಬಸಯ್ಯ ಮಠ ಮಾತನಾಡಿ, ನಮ್ಮ ಭಾಷೆ ಮತ್ತು ಸಾಹಿತ್ಯವನ್ನು ಅರಿತರೆ ನಮ್ಮ ಮಾತು-ನಡವಳಿಕೆ ಶುದ್ಧವಾಗುತ್ತದೆ. ಕನ್ನಡೇತರ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ ಬೆಳೆಸುವ ಅಕಾಡೆಮಿ ಹಾಗೂ ಚಕೋರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ಅಜೀಜ್ ಮಾತನಾಡಿ, ಮನೆಯಲ್ಲಿ ಮಾತೃಭಾಷೆಯನ್ನು ಬಳಸುವುದರ ಜೊತೆಗೆ ವ್ಯವಹಾರ ಮತ್ತು ಅಧ್ಯಯನಕ್ಕಾಗಿ ಬಹುಭಾಷಾ ಜ್ಞಾನ ಅಗತ್ಯವಾಗಿದೆ. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕನ್ನಡ ಉಪನ್ಯಾಸಕರಾದ ಡಾ. ರಾಜಕುಮಾರ ಮಾಳಗೆ ಹಾಗೂ ಡಾ. ಶೀಲಾದೇವಿ ಬಿರಾದಾರ ಸಾಹಿತ್ಯದ ಓದು ಮತ್ತು ಅಧ್ಯಯನದ ಮಹತ್ವವನ್ನು ವಿವರಿಸಿದರು.
ಚಕೋರ ವೇದಿಕೆಯ ಸಂಚಾಲಕ ಡಾ. ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯೋಜನೆಗಳು ಹಾಗೂ ಚಕೋರ ವೇದಿಕೆಯ ಉದ್ದೇಶಗಳನ್ನು ವ�