ರಾಜ್ಯಸಭಾ ಚುನಾವಣೆ: ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದ ಡಾ. ಖರ್ಗೆ..

 

ಕಲಬುರ್ಗಿ, ಜೂ.೫- ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಶುಕ್ರವಾರ ಅಧಿಕೃತವಾಗಿ ತಮ್ಮ ನಾಮಪತ್ರವನ್ನು ಚುನಾವಣಾ ಅಧಿಕಾರಿ ಶ್ರೀಮತಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿರುವ ಚುನಾವಣಾ ಅಧಿಕಾರಿಯ ಕಚೇರಿಗೆ ತೆರಳಿದ ಅವರು, ಮುಂಬರುವ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ದಾಖಲೆಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಿರಿಯ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ, ಭೈರತಿ ಸುರೇಶ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಯ ಬಳಿಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ನಾನು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ಶಾಸಕರು, ನಮ್ಮ ನಾಯಕರು ನನ್ನನ್ನ ಆಯ್ಕೆ ಮಾಡಿದ್ದಾರೆ. ಜೂನ್ ೧೮ ಚುನಾವಣೆಯಲ್ಲಿ ಎಲ್ಲರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸ್ತಾರೆ. ನಿಮ್ಮೆಲ್ಲರ ಬೆಂಬಲ ಬೇಕು ಎಂದು ತಿಳಿಸಿದರು. ಈ ವೇಳೆ ಮಾಧ್ಯಮಗಳು ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ತೆರಳಿದರು

ಪರಿಚಯ:

ಮಾಪಣ್ಣ ಮಲ್ಲಿಕಾರ್ಜುನ್ ಖರ್ಗೆ ಅವರು ೧೯೪೨ರ ಜುಲೈ ೨೧ರಂದು ಬೀದರ್ ಜಿಲ್ಲೆಯ ವರವಟ್ಟಿ ಗ್ರಾಮದಲ್ಲಿ ಮಾಪಣ್ಣ ಮತ್ತು ಸಾಬವ್ವ ದಂಪತಿ ಮಗನಾಗಿ ಜನಿಸಿದರು. ಕಲಬುರ್ಗಿಯ ನೂತನ ವಿದ್ಯಾಲಯದಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸರ್ಕಾರಿ ಡಿಗ್ರಿ ಕಾಲೇಜಿನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು ಮತ್ತು ಶೇಠ್ ಶಂಕರಲಾಲ್ ಲಾಹೋಟಿ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಕಚೇರಿಯಲ್ಲಿ ಜೂನಿಯರ್ ಆಗಿ ಕಾನೂನು ಕ್ರಮ ಕೈಗೊಂಡ ಅವರು ತಮ್ಮ ಕಾನೂನು ವೃತ್ತಿಜೀವನದ ಆರಂಭದಲ್ಲಿ ಕಾರ್ಮಿಕ ಸಂಘಗಳಿಗೆ ಹೋರಾಡಿದರು.

ಮಲ್ಲಿಕಾರ್ಜುನ್ ಖರ್ಗೆ ಅವರು ರಾಧಾಬಾಯಿಯನ್ನು ಮದುವೆಯಾಗಿದ್ದಾರೆ ಮತ್ತು ರಾಜ್ಯದ ಗೃಹ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸೇರಿ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರೂ ಸೇರಿ ಐವರು ಮಕ್ಕಳನ್ನು ಹೊಂದಿದ್ದಾರೆ.

ಖರ್ಗೆ ಅವರು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ಕಲಬುರ್ಗಿಯಲ್ಲಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೬೯ರಲ್ಲಿ ಅವರು ಎಂಎಸ್‌ಕೆಮಿಲ್ ಎಂಪ್ಲಾಯ್ಸ್ ಯೂನಿಯನ್‌ಗೆ ಕಾನೂನು ಸಲಹೆಗಾರರಾದರು. ಅವರು ಸಂಯುಕ್ತ ಮಜ್ದೂರ್ ಸಂಘದ ಪ್ರಭಾವಶಾಲಿ ಕಾರ್ಮಿಕ ಸಂಘದ ನಾಯಕರಾಗಿದ್ದರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಅನೇಕ ಆಂದೋಲನಗಳನ್ನು ನಡೆಸಿದರು. ೧೯೬೯ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು ಮತ್ತು ಕಲಬುರ್ಗಿ ಪಟ್ಟಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

೧೯೭೨ರಲ್ಲಿ ಮೊಟ್ಟ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾದರು. ಸತತ ೮ ಬಾರಿ ಇದೇ ಕ್ಷೇತ್ರದಿಂದ ಖರ್ಗೆಯವರು ಗೆದ್ದಿದ್ದು ಒಂದು ಇತಿಹಾಸ. ೧೯೭೩ರಲ್ಲಿ ಕರ್ನಾಟಕ ರಾಜ್ಯದಲ್ಲಿ ಪುರಸಭೆಯ ಆಕ್ಟ್ರೊಯಿ ನಿರ್ಮೂಲನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ೧೯೭೪ರಲ್ಲಿ ರಾಜ್ಯ ಸ್ವಾಮ್ಯದ ಲೆದರ್ ಡೆವಲಪ್ಮೆಂಟ್ ಕಾರ್ಪೊರೇಶನ್ ಅಧ್ಯಕ್ಷರಾಗಿ ನೇಮಕಗೊಂಡರು. ೧೯೭೬ರಲ್ಲಿ ಅವರು ಪ್ರಾಥಮಿಕ ಶಿಕ್ಷಣಕ್ಕಾಗಿ ರಾಜ್ಯ ಸಚಿವರಾಗಿ ನೇಮಕಗೊಂಡರು, ದೇವರಾಜ್ ಅರಸ್ ಸಚಿವಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ರಾಜ್ಯ ಸಚಿವರಾಗಿ ನೇಮಕಗೊಂಡರು. ೧೯೮೦ರಲ್ಲಿ ಅವರು ಆರ್. ಗುಂಡೂರಾವ್ ಅವರ ಸಂಪುಟದಲ್ಲಿ ಆದಾಯದ ಸಚಿವರಾದರು.

೧೯೮೫ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ನೇಮಕಗೊಂಡರು. ೧೯೯೦ರಲ್ಲಿ ಎಸ್. ಬಂಗಾರಪ್ಪ ಅವರ ಕ್ಯಾಬಿನೆಟ್ನಲ್ಲಿ ಆದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವರಾಗಿ ಸೇರಿಕೊಂಡರು. ೨೦೦೫ರಲ್ಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದಾಗ ಖರ್ಗೆಯವರು ಗುರುಮಿಠಕಲ್ ಕ್ಷೇತ್ರ ಬಿಟ್ಟು ಚಿತ್ತಾಪುರ ಕ್ಷೇತ್ರಕ್ಕೆ ೨೦೦೮ರಲ್ಲಿ ಬಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಒಂಭತ್ತನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನು ಮಾಡಿದರು.

೨೦೦೮ರಲ್ಲಿ ಎರಡನೇ ಬಾರಿ ಪ್ರತಿಪಕ್ಷ ನಾಯಕರಾಗಿ ಖರ್ಗೆಯವರಿಗೆ ನೇಮಿಸಲಾಯಿತು. ನಂತರದ ಬೆಳವಣಿಗೆಯಲ್ಲಿ ಖರ್ಗೆಯವರು ರಾಷ್ಟç ರಾಜಕಾರಣಕ್ಕೆ ಬರಬೇಕೆಂಬ ವರಿಷ್ಠರ ನಿರ್ದೇಶನದ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ೨೦೦೯ರಲ್ಲಿ ಕಲಬುರ್ಗಿ ಸಂಸತ್ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ೨೦೧೪ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಾದರು. ಒಮ್ಮೆ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಉಮೇಶ್ ಜಾಧವ್ ಅವರ ವಿರುದ್ಧ ಖರ್ಗೆಯವರು ಪರಾಭವಗೊಂಡಿದ್ದು, ಆ ಸಂದರ್ಭದಲ್ಲಿ ವರಿಷ್ಠರು ರಾಜ್ಯಸಭಾ ಸ್ಥಾನಕ್ಕೆ ಖರ್ಗೆಯವರನ್ನು ಆಯ್ಕೆ ಮಾಡಿದರು. ನಂತರ ಖರ್ಗೆಯವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದು, ಸದ್ಯಕ್ಕೆ ಅವರೇ ಕಾಂಗ್ರೆಸ್ಸಿನಿAದ ಪ್ರಧಾನಿ ಅಭ್ಯರ್ಥಿ ಎಂಬ ಮಾತುಗಳು ಕಲ್ಯಾಣ ಕರ್ನಾಟಕದಲ್ಲಿ ಕೇಳಿಬರುತ್ತಿವೆ. ಖರ್ಗೆಯವರು ಪಕ್ಷದ ವರಿಷ್ಠರಾದ ಮೇಲೆ ವಿಶೇಷವಾಗಿ ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ್, ಕೇರಳ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುವಂತಾಗಿದೆ. ಆ ನಿಟ್ಟಿನಲ್ಲಿ ಶ್ರೀಮತಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಾ ವಾಡ್ರಾ ಅವರೂ ಸಹ ಖರ್ಗೆಯವರ ನಾಯಕತ್ವಕ್ಕೆ ಬೆಂಬಲ ಹಾಗೂ ಸಹಕಾರ ಕೊಡುತ್ತಿದ್ದಾರೆ.

Share This Article
Leave a Comment