ಮಧ್ಯರಾತ್ರಿ ಮಹಿಳೆಯಂತೆ ನಿಂತ ಪೊಲೀಸ್ ಕಮಿಷನರ್; 3 ಗಂಟೆಯಲ್ಲಿ 40 ಮಂದಿಯಿಂದ ಕಿರುಕುಳ

 

ಹೈದರಾಬಾದ್, ಮೇ.7- ಒಂಟಿ ಮಹಿಳೆಯರಿಗೆ ರಾತ್ರಿ ವೇಳೆ ಎದುರಾಗುವ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಅವರು ಸಿನಿಮೀಯ ಶೈಲಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ರೋಡ್ ರೋಮಿಯೋಗಳಿಗೆ ಶಾಕ್ ನೀಡಿದ್ದಾರೆ.

ಮಲ್ಕಾಜ್‌ಗಿರಿ ಕಮಿಷನರೇಟ್‌ನ ಮೊದಲ ಮಹಿಳಾ ಪೊಲೀಸ್ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ಮಹಿಳಾ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಸಂದೇಶ ನೀಡಲು ನಿರ್ಧರಿಸಿದರು. ಅದರಂತೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30ರವರೆಗೆ ದಿಲ್‌ಸುಖ್‌ನಗರ ಪ್ರದೇಶದಲ್ಲಿ ಸಾಮಾನ್ಯ ಮಹಿಳೆಯಂತೆ ಸರಳ ಉಡುಪಿನಲ್ಲಿ ರಸ್ತೆಬದಿಯಲ್ಲಿ ಬಸ್‌ಗಾಗಿ ಕಾಯುತ್ತಿರುವಂತೆ ನಿಂತಿದ್ದರು.

ಈ ವೇಳೆ ಹಲವಾರು ಪುರುಷರು ಸುಮತಿ ಅವರ ಬಳಿ ಬಂದು ಅಸಭ್ಯ ವರ್ತನೆ ತೋರಿದ್ದು, ಅಶ್ಲೀಲ ಮಾತುಗಳ ಮೂಲಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಕೇವಲ ಮೂರು ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮಹಿಳೆಗೆ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.

ಮಫ್ತಿಯಲ್ಲಿ ಸಮೀಪದಲ್ಲೇ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರಿಗೆ ಕಠಿಣ ಎಚ್ಚರಿಕೆ ನೀಡಿದ ಸುಮತಿ ಅವರು, “ರಸ್ತೆಯಲ್ಲಿ ಮಹಿಳೆಯರನ್ನು ಕಂಡಾಗ ಅಸಭ್ಯವಾಗಿ ವರ್ತಿಸದೆ, ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಓದು ಮತ್ತು ವೃತ್ತಿಜೀವನದ ಕಡೆ ಗಮನಹರಿಸಿ. ಗಾಂಜಾ ಹಾಗೂ ಮದ್ಯದ ವ್ಯಸನದಿಂದ ದೂರವಿರಿ” ಎಂದು ಬುದ್ಧಿವಾದ ಹೇಳಿದ್ದಾರೆ.

ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಸುಮತಿ ಅವರು ವಿಶೇಷ ಗುಪ್ತಚರ ಶಾಖೆ (SIB) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಹಲವಾರು ನಕ್ಸಲರು ಶರಣಾಗಿದ್ದರೆಂದು ತಿಳಿದುಬಂದಿದೆ.

Share This Article
Leave a Comment