ಕಲಬುರ್ಗಿ, ಮೇ.೯- ಬಿಇಡಿ ಪರೀಕ್ಷಾ ಅಕ್ರಮ ಬಯಲಿಗೆಳೆದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಅವರಿಗೆ ಆಸಿಡ್ ದಾಳಿಯ ಬೆದರಿಕೆ ಬಂದಿದೆ. ಮರು ಮೌಲ್ಯಮಾಪನದಲ್ಲಿ ಅಂಕ ಕಡಿಮೆಯಾದರೆ ದಾಳಿ ಮಾಡುವುದಾಗಿ ಅನಾಮಧೇಯ ಪತ್ರ ಬಂದಿದೆ. ಅಕ್ರಮ ಬಯಲಿಗೆಳೆದಿದ್ದೇ ಇದೀಗ ಕುಲಪತಿಗೆ ಮುಳುವಾಯ್ತಾ ಎಂಬ ಪ್ರಶ್ನೆ ಮೂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ
ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದಾನೆ. ೨೦೨೪ರಲ್ಲಿ ನಡೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಕುಲಪತಿಗಳು ಪತ್ತೆಹಚ್ಚಿ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಕುಲಪತಿಗಳ ವಿರುದ್ಧ ಈ ಮಟ್ಟದ ಬೆದರಿಕೆ ಬಂದಿರುವುದು ಇದೇ ಮೊದಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
೨೦೨೪ರ ಬಿಇಡಿ ಮೌಲ್ಯಮಾಪನ ಅಕ್ರಮವನ್ನು ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಅವರು ಪತ್ತೆ ಹಚ್ಚಿದ್ದರು. ನಂತರ ಅಂಕ ತಿದ್ದುಪಡಿ ಹಗರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಿತ್ತು. ಆ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿ ಮರುಮೌಲ್ಯಮಾಪನದಲ್ಲಿ ಫೇಲ್ ಆದರೆ ಮುಖಕ್ಕೆ ಆಸಿಡ್ ಹಾಕುವುದಾಗಿ ಅನಾಮಧೇಯ ಬೆದರಿಕೆ ಹಾಕಿದ್ದು, ಅಕ್ರಮಕ್ಕೆ ತಡೆಯೊಡ್ಡಿದ್ದೇ ಮುಳುವಾಯಿತೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕಳೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ವಿಶ್ವವಿದ್ಯಾಲಯದ ಆಂತರಿಕ ಸಮಿತಿಯ ವರದಿಯಿಂದ ದೃಢಪಟ್ಟಿತ್ತು. ಕುಲಪತಿಗಳು ಈ ವಿಷಯವನ್ನು ತಕ್ಷಣವೇ ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತಂದಿದ್ದರು. ರಾಜ್ಯಪಾಲರ ಆದೇಶದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿದ್ದು, ಸಮಿತಿಯ ಸೂಚನೆಯ ಮೇರೆಗೆ ಸದ್ಯ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಈ ಮರುಮೌಲ್ಯಮಾಪನದಿಂದಾಗಿ ಅಕ್ರಮವಾಗಿ ಅಂಕ ಪಡೆದವರಿಗೆ ಸಂಕಷ್ಟ ಎದುರಾಗಿದೆ.
೨ ಲಕ್ಷ ರೂ.ಗಳನ್ನು ನೀಡಿ ಬಿಇಡಿ ಪ್ರವೇಶ ಪಡೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ವಿಶ್ವವಿದ್ಯಾಲಯ ಸತ್ಯಶೋಧನಾ ಸಮಿತಿಯ ನಿರ್ಧಾರ ನಮಗೆ ಇಷ್ಟವಾಗಿಲ್ಲ. ಒಂದು ವೇಳೆ ಮರು ಮೌಲ್ಯಮಾಪನದಿಂದಾಗಿ ಅಂಕಗಳು ಕಡಿಮೆಯಾದರೆ ಅಥವಾ ನಾವು ಅನುತ್ತೀರ್ಣರಾದರೆ, ನಿಮ್ಮ ಮುಖಕ್ಕೆ ಆಸಿಡ್ ಹಾಕಿ ನರಳಿ ಬದುಕುವಂತೆ ಮಾಡುತ್ತೇವೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಅನಾಮಧೇಯ ಪತ್ರದಿಂದ ಆತಂಕಗೊAಡ ಕುಲಪತಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಈಗ ನ್ಯಾಯಾಲಯದ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.