ಅನಿಲ್ ಜಾಧವರಿಗೆ ಪರಿಷತ್ ಸ್ಥಾನ ನೀಡಿ: ಕಾಂಗ್ರೆಸ್ ವರಿಷ್ಠರಿಗೆ ಕೋರಿಕೆ

 

ಬೀದರ್, ಜೂ.೨೪- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಅನಿಲ್ ಕುಮಾರ್ ಜಾಧವ್ ಅವರಿಗೆ ವಿಧಾನ ಪರಿಷತ್ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ಪ್ರಮುಖರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ಮನವಿ ಮಾಡಿದರು.

ಅನಿಲ್ ಕುಮಾರ್ ಜಾಧವ್ ಅವರು ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾರೆ. ಪಕ್ಷ ಸಂಘಟನೆ ಬಲಪಡಿಸುವುದು, ವಿವಿಧ ಜನಪರ ಹೋರಾಟಗಳಲ್ಲಿ ಭಾಗವಹಿಸುವುದು ಹಾಗೂ ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದಲ್ಲದೆ, ವೋಟ್ ಚೋರಿ ವಿರೋಧಿ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿರುವ ಅನಿಲ್ ಜಾಧವ್ ಅವರು, ಕ್ರೈಸ್ತ ನಿಗಮ ಮಂಡಳಿ ಸ್ಥಾಪನೆ ಹಾಗೂ ಕ್ರಿಶ್ಚಿಯನ್ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವಿಧಾನ ಪರಿಷತ್ತಿನ ಐದು ಸ್ಥಾನಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ಅವುಗಳಲ್ಲಿ ಒಂದು ಸ್ಥಾನವನ್ನು ಕ್ರಿಶ್ಚಿಯನ್ ಕೋಟಾದಡಿ ಅನಿಲ್ ಕುಮಾರ್ ಜಾಧವ್ ಅವರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ ೬೦ ವರ್ಷಗಳಿಂದ ಈ ಭಾಗದ ಕ್ರಿಶ್ಚಿಯನ್ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿದ್ದರೂ, ಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯ ಅಥವಾ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಗಳಲ್ಲಿ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ. ಹೀಗಾಗಿ ಈ ಬಾರಿ ಐದು ಎಂಎಲ್‌ಸಿ ನಾಮನಿರ್ದೇಶಿತ ಸ್ಥಾನಗಳಲ್ಲಿ ಒಂದನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಿಟ್ಟು, ಅನಿಲ್ ಕುಮಾರ್ ಜಾಧವ್ ಅವರನ್ನು ನಾಮನಿರ್ದೇಶನ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಯುವ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಇಮ್ಯಾನ್ವೆಲ್ ಮಂದಕನಳ್ಳಿ, ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಾಜಕುಮಾರ್ ಕೊಳಾರ್, ಕ್ರಿಶ್ಚಿಯನ್ ಮುಖಂಡರಾದ ಅರುಣ್ ಅಣದೂರು, ಜೇಮ್ಸ್ ಕೋಳಾರ ಹಾಗೂ ಉಮೇಶ್ ಗಾಯಕ್ವಾಡ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ಮನವಿ ಸಲ್ಲಿಸಿದರು.

Share This Article
Leave a Comment