ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು: ಸಿಪಿಐ(ಎಂ) ಆಗ್ರಹ

 ಕಲಬುರಗಿ: ರಾಜ್ಯದ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಆಕ್ಷೇಪಣೆ ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅವರ ಹೆಸರಿನಲ್ಲಿ ಸಲ್ಲಿಸಲಾದ ಆಕ್ಷೇಪಣೆಯಲ್ಲಿ, ಟಾಟಾ ಪವರ್ ಸಲ್ಲಿಸಿರುವ ಅರ್ಜಿ ಅಪೂರ್ಣವಾಗಿದ್ದು, ವಿದ್ಯುತ್ ವಿತರಣೆಗೆ ಅಗತ್ಯವಾದ ಸ್ವಂತ ಜಾಲ, ಮೂಲಸೌಕರ್ಯ, ಬಂಡವಾಳ ಹೂಡಿಕೆ, ತಾಂತ್ರಿಕ ಯೋಜನೆ, ಸಿಬ್ಬಂದಿ ನೇಮಕಾತಿ ಹಾಗೂ ಗುಣಮಟ್ಟದ ಸೇವೆ ಒದಗಿಸುವ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.

ಸಾರ್ವಜನಿಕ ಹಣದಿಂದ ನಿರ್ಮಾಣಗೊಂಡಿರುವ ವಿದ್ಯುತ್ ಮೂಲಸೌಕರ್ಯವನ್ನು ಬಳಸಿಕೊಂಡು ಖಾಸಗಿ ಲಾಭ ಗಳಿಸುವ ಉದ್ದೇಶವೇ ಅರ್ಜಿಯ ಹಿಂದಿದ್ದು, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ಈಗಾಗಲೇ ಸಾರ್ವಜನಿಕ ವಿದ್ಯುತ್ ವಿತರಣಾ ಸಂಸ್ಥೆಗಳು ಸೇವೆ ನೀಡುತ್ತಿದ್ದು, ಹೊಸ ಖಾಸಗಿ ಕಂಪನಿಯ ಅಗತ್ಯವಿಲ್ಲ ಎಂದು ತಿಳಿಸಿದೆ.

ಖಾಸಗಿ ಕಂಪನಿಗಳ ಪ್ರವೇಶದಿಂದ ಕ್ರಾಸ್ ಸಬ್ಸಿಡಿ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಮತ್ತು ರೈತರಿಗೆ ಹೆಚ್ಚುವರಿ ವಿದ್ಯುತ್ ದರದ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಪಕ್ಷ ಎಚ್ಚರಿಸಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ದೊರೆಯುತ್ತಿರುವ ಸಬ್ಸಿಡಿ ಹಾಗೂ ಗೃಹಜ್ಯೋತಿ ಸೇರಿದಂತೆ ಜನಪರ ಯೋಜನೆಗಳ ಅನುಷ್ಠಾನಕ್ಕೂ ತೊಂದರೆಯಾಗುವ ಅಪಾಯವಿದೆ ಎಂದು ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಕಂಪನಿಗಳು ಶಾಶ್ವತ ಉದ್ಯೋಗಗಳ ಬದಲು ಗುತ್ತಿಗೆ ಪದ್ಧತಿಯನ್ನು ಅನುಸರಿಸುವ ಸಾಧ್ಯತೆ ಹೆಚ್ಚಿರುವುದರಿಂದ ಉದ್ಯೋಗ ಭದ್ರತೆಗೆ ಧಕ್ಕೆಯಾಗುವುದರ ಜೊತೆಗೆ ಸೇವೆಯ ಗುಣಮಟ್ಟ ಕುಸಿಯುವ ಆತಂಕವೂ ಇದೆ ಎಂದು ಸಿಪಿಐ(ಎಂ) ತಿಳಿಸಿದೆ.

ಮುಂಬೈ, ದೆಹಲಿ ಹಾಗೂ ಒಡಿಶಾದಲ್ಲಿ ಟಾಟಾ ಪವರ್ ಸೇವೆಗಳ ಕುರಿತು ದರ ಹೆಚ್ಚಳ, ವಿದ್ಯುತ್ ವ್ಯತ್ಯಯ, ಬಿಲ್ಲಿಂಗ್ ದೂರುಗಳು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿ ವಿದ್ಯುತ್ ವಿತರಣೆಯ ಅನುಭವವೂ ಕಂಪನಿಗೆ ಇಲ್ಲ ಎಂದು ಪಕ್ಷ ಆರೋಪಿಸಿದೆ.

ವಿದ್ಯುತ್ ಕಾಯ್ದೆ-2003ರ ವಿವಿಧ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ವಿದ್ಯುತ್ ವಿತರಣಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ ಅರ್ಜಿ ಸಲ್ಲಿಸಿರುವುದು ಗಂಭೀರ ಲೋಪವಾಗಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ, ಗ್ರಾಹಕರ ರಕ್ಷಣೆ ಹಾಗೂ ಸಾರ್ವಜನಿಕ ವಿದ್ಯುತ್ ಸಂಸ್ಥೆಗಳ ಹಣಕಾಸು ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಟಾಟಾ ಪವರ್ ಕಂಪನಿಯ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತಿರಸ್ಕರಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಶ್ರೀಮಂತ ಬಿರಾದಾರ, ಸುಧಾಮ ಧನ್ನಿ, ಶಾಂತಾ ಘಂಟೆ, ಪಾಂಡುರಂಗ ಮಾವಿನಕರ್, ನಾಗಪ್ಪ, ಲವಿತ್ರ, ಸರ್ವೇಶ ಮಾವಿನಕರ್, ಇಮಾಮ್ ಸಾಬ್, ತಾಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Share This Article
Leave a Comment