ಕಲಬುರಗಿ, ಜೂ. 22: ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂತ್ ಗ್ರಾಮದ ಸೀಮಾಂತರದಲ್ಲಿರುವ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆಹಚ್ಚಿ, ಸುಮಾರು 7 ಕೆಜಿ 470 ಗ್ರಾಂ ತೂಕದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ₹3.37 ಲಕ್ಷ ಮೌಲ್ಯದ ಗಾಂಜಾ ಬೆಳೆಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇರಾಜ್ ತಂದೆ ಸಿರಾಜ್ ಪಟೇಲ್ ಕೇರಿ ಎಂಬಾತನನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಿವಶಂಕರ್ ಸಾಹು ಅವರ ನೇತೃತ್ವದಲ್ಲಿ ಪಿಎಸ್‌ಐ ಸುಖಾನಂದ ಸಿಂಗೆ ಹಾಗೂ ಸಿಬ್ಬಂದಿಗಳಾದ ಗುರುನಾಥರೆಡ್ಡಿ, ಸೈಯದ್ ಶಕೀಲ್, ಸುನೀಲ್ ಚವ್ಹಾಣ್, ಹುಸೇನ್ ಭಾಷಾ, ಬದ್ದು ರಾಠೋಡ, ಸಂತೋಷ ಬಾಕಿ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಕುಪೇಂದ್ರ ಹಾಗೂ ಸಂಗಮೇಶ್ವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಅಕ್ರಮ ಮಾದಕ ವಸ್ತುಗಳ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.