ನವದೆಹಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಹಾಗೂ ದೀರ್ಘದೂರ ಓಟಗಾರ್ತಿ ಪಾರುಲ್ ಚೌಧರಿ ಅವರು ಭಾರತೀಯ ಅಥ್ಲೆಟಿಕ್ಸ್ ಪ್ರಶಸ್ತಿಗಳ ಉದ್ಘಾಟನಾ ಸಮಾರಂಭದಲ್ಲಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಂಬತ್ತು ತಿಂಗಳ ವಿರಾಮದ ಬಳಿಕ ತಮ್ಮ ಋತುವಿನ ಆರಂಭವನ್ನು ಯಶಸ್ವಿಯಾಗಿ ಆರಂಭಿಸಿದ ನೀರಜ್ ಚೋಪ್ರಾ, ಶನಿವಾರ ನಡೆದ ಭಾರತೀಯ ಅಥ್ಲೆಟಿಕ್ಸ್ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು. ದೇಶದ ಟ್ರ್ಯಾಕ್ ಮತ್ತು ಫೀಲ್ಡ್ ಕ್ಷೇತ್ರದ ಪ್ರಸ್ತುತ ಹಾಗೂ ಮಾಜಿ ಕ್ರೀಡಾಪಟುಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ) ವತಿಯಿಂದ 2025ನೇ ಸಾಲಿನ ವರ್ಷದ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿಯನ್ನು ನೀರಜ್ ಚೋಪ್ರಾ ಹಾಗೂ ಪಾರುಲ್ ಚೌಧರಿ ಅವರಿಗೆ ಪ್ರದಾನಿಸಲಾಯಿತು. ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ವಿತರಿಸಿದರು.
ಪಾರುಲ್ ಚೌಧರಿ ಅವರು ಮಹಿಳೆಯರ 3,000 ಮೀಟರ್ ಸ್ಟೀಪಲ್‌ಚೇಸ್ ಮತ್ತು 5,000 ಮೀಟರ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಮುಖ ಅಥ್ಲೀಟ್‌ಗಳಾಗಿ ಹೊರಹೊಮ್ಮಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಗೌರವಿಸುವ ಉದ್ದೇಶದಿಂದ ಆರಂಭಿಸಲಾದ ಈ ಪ್ರಶಸ್ತಿ ಸಮಾರಂಭವು ಅಥ್ಲೀಟ್‌ಗಳ ಸಾಧನೆಗೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ.