ಬಾಲಕಿಯರ ಕಾಲೇಜಿನ ಛಾವಣಿ ಕುಸಿತ: ಪರಿಹಾರ, ನೂತನ ಕಟ್ಟಡಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

 

ಕಲಬುರ್ಗಿ, ಜೂ.೧೩- ನಗರದ ಏಕೈಕ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಛಾವಣಿ ಕುಸಿತದಿಂದ ಗಾಯಗೊಂಡ ವಿದ್ಯಾರ್ಥಿನಿಯರಿಗೆ ಪರಿಹಾರ ಹಾಗೂ ನೂತನ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ತುಳಜಾರಾಮ್ ಎನ್.ಕೆ., ಅವರು ಮಾತನಾಡಿ, ಜಿಲ್ಲೆಯಾದ್ಯಂತ ನೂರಾರು ಹಳ್ಳಿಗಳಿಂದ, ಬಡ ರೈತ ಹಾಗೂ ಕಾರ್ಮಿಕ ಕುಟುಂಬಗಳ ಸಾವಿರಾರು ಹೆಣ್ಣುಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಈ ಕಾಲೇಜನ್ನು ನಂಬಿ ಬರುತ್ತಿದ್ದಾರೆ. ನಿನ್ನೆ ಕಾಲೇಜಿನ ಮೂರನೇ ಮಹಡಿಯಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ತರಗತಿ ನಡೆಯುತ್ತಿದ್ದಾಗ ಛಾವಣಿಯ ಸಿಮೆಂಟ್ ಪದರು ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ. ಈ ಘಟನೆಯ ನಂತರ ವಿದ್ಯಾರ್ಥಿನಿಯರು ಹಾಗೂ ಪೋಷಕರು ಜೀವಭಯದಲ್ಲೇ ಕಾಲೇಜಿಗೆ ಬರುವ ಅನಿವಾರ್ಯತೆ ನಿರ್ಮಾಣವಾಗಿದೆ. ಸರ್ಕಾರ ಈ ಕೂಡಲೇ ಗಾಯಗೊಂಡಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ಪರಿಹಾರ ನಿಧಿಯನ್ನು ಮಂಜೂರು ಮಾಡಬೇಕು ಮತ್ತು ಶಿಥಿಲಗೊಂಡಿರುವ ಪ್ರಸ್ತುತ ಕಟ್ಟಡವನ್ನು ತಕ್ಷಣವೇ ದುರಸ್ತಿಗೊಳಿಸಿ, ನೂತನ ಕಟ್ಟಡದ ನಿರ್ಮಾಣಕ್ಕಾಗಿ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದು ತೀವ್ರವಾಗಿ ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ಬಹುತೇಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಬಂದರೆ ಯಾವಾಗ ಕಟ್ಟಡ ಕುಸಿಯುತ್ತದೋ ಎಂಬ ಭೀತಿಯಲ್ಲೇ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಕನಿಷ್ಠ ಗುಣಮಟ್ಟದ ಕಟ್ಟಡ, ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಈ ಆಘಾತಕಾರಿ ಘಟನೆಯನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕಾಲೇಜಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪ್ರಸ್ತುತ ಭಯದ ನೆರಳಿನಲ್ಲಿರುವ ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿನಿಯರ ಹಿತರಕ್ಷಣೆಗಾಗಿ ಸಂಘಟನೆಯು ಜಿಲ್ಲಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೋಡ್ಡಮನಿ, ಖಜಾಂಚಿ ಸ್ಫೂರ್ತಿ ಗುರಜಲ್ಕರ್, ಸದಸ್ಯರಾದ ದೇವರಾಜ್ ರಾಜೋಳ್, ರಾಹುಲ್ ಜಾಧವ್, ಯುವರಾಜ್ ರಾಠೋಡ್, ಬಾಬು ಪವಾರ್, ಮತ್ತು ಬೃಂದಾ, ಅನಿತಾ, ಪ್ರೀತಿ, ಕಾವೇರಿ, ಪ್ರೀಯಾ, ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರಸ್ತೆ ತಡೆ: ಇನ್ನೊಂದೆಡೆ ಸರ್ಕಾರಿ ಕಾಲೇಜಿನ ಮೇಲ್ಛಾವಣೆ ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು. ಹೋರಾಟದ ನೇತೃತ್ವ ವಹಿಸಿದ್ದ ನಾಯಕರಿಗೆ ಪೋಲಿಸರು ಅಲ್ಲಿಂದ ಚದುರಿಸಿದರು. ಈ ಮಧ್ಯೆ, ಗಾಯಾಳು ವಿದ್ಯಾರ್ಥಿಗಳನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ ಸಾಂತ್ವನ ಹಾಗೂ ಧೈರ್ಯ ಹೇಳುತ್ತಿದ್ದಾರೆ.

Share This Article
Leave a Comment