ಗೊಲ್ಲಾಳೇಶ್ವರ ಆಗ್ರೋ ಮಾಲೀಕರ ವಿರುದ್ಧ ಕ್ರಮಕ್ಕೆ ರೈತ ಹಾಗೂ ಕನ್ನಡಪರ ಸಂಘಟನೆಗಳ ಆಗ್ರಹ: ಜೂನ 15 ರಂದು ಹೋರಾಟದ ಎಚ್ಚರಿಕೆ.

ಅಫಜಲಪುರ, ಜೂ.10: ತಾಲೂಕಿನ ಗೊಲ್ಲಾಳೇಶ್ವರ ಆಗ್ರೋ ಸಂಸ್ಥೆಯ ಮಾಲೀಕರು ರೈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಎಫ್‌ಐಆರ್ ದಾಖಲಿಸಿ, ಆಗ್ರೋ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ತಹಸೀಲ್ದಾರ್ ಹಾಗೂ ಕೃಷಿ ನಿರ್ದೇಶಕರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಮಹಾಂತೇಶ್ ಜಮಾದಾರ

ಜೂನ್ 4ರಂದು ಅಫಜಲಪುರ ತಾಲೂಕಿನ ರೈತರೊಬ್ಬರು ಗೊಲ್ಲಾಳೇಶ್ವರ ಆಗ್ರೋ ಕೇಂದ್ರಕ್ಕೆ ರಸಗೊಬ್ಬರ ಖರೀದಿಸಲು ತೆರಳಿದ್ದ ವೇಳೆ, ಯೂರಿಯಾ ಗೊಬ್ಬರದೊಂದಿಗೆ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ,ರೈತರು ಅದನ್ನು ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ವಿವಿಧ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದು ಹೇಳಿದರು.

ಘಟನೆ ನಡೆದು ಆರು ದಿನಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಎಫ್‌ಐಆರ್ ದಾಖಲಿಸಿಲ್ಲ ಹಾಗೂ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತ ಸಮುದಾಯದಲ್ಲಿ ಅನುಮಾನಗಳು ಮೂಡಿದ್ದು, ಇದು ರೈತರಿಗೆ ಅವಮಾನ ಮಾಡಿದಂತಾಗಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ಈ ಹಿನ್ನೆಲೆಯಲ್ಲಿ ಕೂಡಲೇ ಕಾನೂನು ಕ್ರಮ ಜರುಗಿಸಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲದಿದ್ದರೆ ಜೂನ್ 15ರಂದು ವಿವಿಧ ರೈತ ಹಾಗೂ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಅಫಜಲಪುರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಲ್ಲದೆ, ಉದ್ದೇಶಿತ ಪ್ರತಿಭಟನೆಗೆ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಅಗತ್ಯ ಬಂದೋಬಸ್ತ್ ಹಾಗೂ ಅನುಮತಿ ನೀಡಬೇಕೆಂದು ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

Share This Article
Leave a Comment