ಕಲಬುರಗಿ,ಜೂ.9-ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಮಂಗಳವಾರ ಜಿಲ್ಲೆಯ ಅಫಜಲಪೂರ ತಾಲೂಕಿನ ದತ್ತನ ಸುಕ್ಷೇತ್ರವಾದ ಐತಿಹಾಸಿಕ ದೇವಲ ಗಾಣಗಾಗಪುರ ಕ್ಷೇತ್ರಕ್ಕೆ ಭೇಟಿ ನೀಡಿ ದೇವಸ್ಥಾನ ಮತ್ತ ಅದರ ಸುತ್ತುಮುತ್ತಲು ನಡೆಯುತ್ತಿರುವ ವಿವಿಧ ಪ್ರವಾಸಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.ನೆರೆ ರಾಜಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳಿಗೆ ಇಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಕ್ಷೇತ್ರದಾದ್ಯಂತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ದೇವಸ್ಥಾನ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕು ಎಂದರಲ್ಲದೆ ಪ್ರಗತಿಯಲ್ಲಿರುವ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಿ ಕಾಲಮಿತಿಯಲ್ಲಿ ಪೂರೈಸಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಡಿ.ಸಿ ಅವರು ಗಾಣಗಾಪುರ್ ಬ್ರಿಜ್ ಕಮ್ ಬ್ಯಾರೇಜ್ ಗೆ ಭೇಟಿ ನೀಡಿ, ಅಲ್ಲಲ್ಲಿ ಗ್ರಿಲ್ ಮುರಿದಿರುವುದರಿಂದ ಕೂಡಲೆ ದುರಸ್ತಿ ಮಾಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಅಫಜಲಪೂರ ಹೋಗುವ ಮಾರ್ಗದಲ್ಲಿ ಅತನೂರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಬಿತ್ತನೆ ಬೀಜ ಮತ್ತು ಅಫಜಲಪೂರ ಪಟ್ಟಣದಲ್ಲಿನ ಆರ್.ಎಸ್.ಕೆ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ರಸಗೊಬ್ಬರ ವಿತರಣೆ ಮಾಡಿದಲ್ಲದೆ ಪಟ್ಟಣದ ಎರಡ್ಮೂರು ರಸಗೊಬ್ಬರ ಮಾರಾಟ ಅಂಗಡಿಗಲಿಗೆ ದಿಢೀರ್ ಭೇಟಿ ನೀಡಿ ದಾಸ್ತಾನು, ಮಾರಾಟ, ಪಿ.ಓ.ಎಸ್ ಅಪಡೇಟ್ ಮಾಡುತ್ತಿರುವ ಕುರಿತು ಖುದ್ದಾಗಿ ಪರಿಶಿಲಿಸಿದರು.ನಂತರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಪುರಸಭೆ ಮತ್ತು ಕಂದಾಯ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಪಟ್ಟಣ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಪುರಸಭೆಯ ಜವಾಬ್ದಾರಿಯಾಗಿದೆ.ಅದನ್ನು ಕಟ್ಟುನಿಟ್ಟಾಗಿ ಮಾಡಬೇಕು. ಇನ್ನು ಮಸತೃ ಇಲಾಖೆಯಾಗಿರುವ ಕಂದಾಯ ಇಲಾಖೆಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅನಗತ್ಯ ಕಚೇರಿಗೆ ಅಲೆದಾಡಿಸಬಾರದು ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ್ ದಾಸರ್, ಶ್ರೀ ದತ್ತಾತ್ರೆಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.