ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನಕ್ಕಾಗಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಪ್ರತಿಭಟನೆ.

 

ಬೀದರ್, ಜೂ.೧- ರಾಜ್ಯದಲ್ಲಿ ಹೊಸದಾಗಿ ರಚನೆಯಾಗಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ, ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡುವ ಮೂಲಕ ಈ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾ ಸಂಸ್ಥಾಪಕ ಉಪಾಧ್ಯಕ್ಷ ಎಂ.ಡಿ. ಮಸ್ತಾನ ಮುಲ್ಲಾ ಅವರು ಮಾತನಾಡಿ, ಈಶ್ವರ ಖಂಡ್ರೆ ಅವರು ಬಡವರ ಬಂಧು, ಅಭಿವೃದ್ಧಿಯ ಹರಿಕಾರ ಹಾಗೂ ಜನಪ್ರಿಯ ನಾಯಕರಾಗಿದ್ದು, ಪಕ್ಷ ಅಥವಾ ಸರ್ಕಾರ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸುವ ನಾಯಕತ್ವ ಗುಣ ಹೊಂದಿದ್ದಾರೆ ಎಂದರು.

ರಾಜ್ಯಾದ್ಯAತ ಅಪಾರ ಬೆಂಬಲಿಗರನ್ನು ಹೊಂದಿರುವ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದ್ದು, ಈ ಭಾಗದ ಜನರ ಬಹುಕಾಲದ ಬೇಡಿಕೆಗೆ ನ್ಯಾಯ ದೊರೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ಪ್ರಾತಿನಿಧ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಡ್ಯಾನಿಯಲ್ ಮಂಗಲಪೇಟ್ ಹಾಗೂ ಸ್ವಾಮಿದಾಸ್ ಚಿಲ್ಲರ್ಗಿ, ಭಾಲ್ಕಿ ಮುಖಂಡರಾದ ವಿನೋದಕುಮಾರ್, ಮೋಹನಕುಮಾರ್ ಮಾಳಗೆ, ಶ್ರೀಮಂತ ಪೂಜಾರಿ, ಸೈಯದ್ ಹಾಜಿ ಹಾಗೂ ಜಾನ್‌ಸನ್ ರುದನೂರ್ ಮುಂತಾದವರು ಪಾಲ್ಗೊಂಡಿದ್ದರು.

Share This Article
Leave a Comment