ಅಂಬೇಡ್ಕರ್ ಫೋಟೋ ಇಟ್ಕೊಂಡು ಬೀದಿಯಲ್ಲಿ ಆಚರಣೆ ಮಾಡುವವರು ನಕಲಿ ಅಂಬೇಡ್ಕರ್‌ವಾದಿಗಳು : ಜ್ಞಾನ ಪ್ರಕಾಶ ಸ್ವಾಮೀಜಿ.

 

ಅಫಜಲಪೂರ : ಪಟ್ಟಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

“ಜಾತಿಯ ಜೈಲಿನಿಂದ ನಾವೆಲ್ಲರೂ ಹೊರಗೆ ಬರಬೇಕು. ಬಸವಣ್ಣನನ್ನು ಜಾತಿಯ ಜೈಲಿಗೆ ಹಾಕಿದವರು ದೇಶದ್ರೋಹಿಗಳು. ಇಂತಹ ಪುಣ್ಯಭೂಮಿಯಲ್ಲಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ದುರ್ದೈವದ ಸಂಗತಿ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಫೋಟೋ ಹಿಡಿದು ನೀವು ಬೀದಿಯಲ್ಲಿ ನಿಂತಿದ್ದೀರಿ, ಆದರೆ ಸಂವಿಧಾನವನ್ನು ಹಿಡಿದು ಮೇಲ್ಜಾತಿಯವರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿದ್ದಾರೆ. ಸೆಲ್ಫ್ ರೆಸ್ಪೆಕ್ಟ್ ಹಾಗೂ ಡಿಗ್ನಿಟಿ ನಿಮ್ಮಲ್ಲಿ ಬರಬೇಕು. ನನ್ನನ್ನು ಆಚರಣೆಗೆ ಸೀಮಿತ ಮಾಡಬೇಡಿ, ನನ್ನನ್ನು ಅನುಸರಿಸಿ ಎಂದು ಅಂಬೇಡ್ಕರ್ ಹೇಳಿದ್ದಾರೆ” ಎಂದು ಹೇಳಿದರು.

“ಅಂಬೇಡ್ಕರ್ ಫೋಟೋ ಇಟ್ಕೊಂಡು ಬೀದಿಯಲ್ಲಿ ಆಚರಣೆ ಮಾಡುವವರು ನಕಲಿ ಅಂಬೇಡ್ಕರ್‌ವಾದಿಗಳು. ಅಂಬೇಡ್ಕರ್ ವಿಚಾರಗಳು ವಿಜೃಂಭಿಸಬೇಕು” ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಅರುಣ್ ಕುಮಾರ ಎಂ. ಪಾಟೀಲ್, “ಡಿಜೆ ಸೇರಿದಂತೆ ಅನಗತ್ಯ ದುಂದುವೆಚ್ಚಗಳನ್ನು ಮಾಡಬಾರದು. ಅದು ಬಾಬಾಸಾಹೇಬರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸಮಾಜವನ್ನು ಶಿಕ್ಷಣ ಮತ್ತು ಸಂಘಟನೆ ಮೂಲಕ ಕಟ್ಟಬೇಕು. ಸಮಾಜದ ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಜಯಂತಿಗಳು ಮಾದರಿಯಾಗಬೇಕು” ಎಂದರು.

“ಏಪ್ರಿಲ್ 14ರಂದೇ ಜಯಂತಿ ಆಚರಿಸಿದರೆ ಇನ್ನಷ್ಟು ಉತ್ತಮ ಸಂದೇಶ ಸಮಾಜಕ್ಕೆ ತಲುಪುತ್ತದೆ” ಎಂದು ಸಲಹೆ ನೀಡಿದರು.

ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಮಾತನಾಡಿ, “ಜನರ ಕೈಯಲ್ಲಿ ಸಂವಿಧಾನ ನೀಡಿರುವ ಏಕೈಕ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಅವರ ತತ್ವ-ಸಿದ್ಧಾಂತದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವರಾಧ್ಯ ಮಳೇಂದ್ರ ಶ್ರೀಗಳು, ಡಾ. ಸಿದ್ದರಾಮ ಬೆಲ್ದಾಳ ಶ್ರೀಗಳು, ಬಂತೆ ವರಜ್ಯೋತಿ , ಅರುಣ ಕುಮಾರ ಪಾಟೀಲ, ಮತೀನ್ ಪಟೇಲ್, ಜೆ.ಎಂ. ಕೊರಬು, ಪ್ರಕಾಶ ಜಮಾದಾರ, ಪಪ್ಪು ಪಟೇಲ್, ಚಂದ್ರಶೇಖರ ಕರಜಗಿ, ಹಣಮಂತರಾಯ ದೊಡ್ಮನಿ, ವಿಜಯಕುಮಾರ ಸಾಲಿಮನಿ, ರಮೇಶ ಪೂಜಾರಿ, ಶಿವರಾಜ ಬಾದನಳ್ಳಿ, ರಾಜಕುಮಾರ ಬಬಲಾದ, ನಾಗೇಶ ಕೊಳ್ಳಿ, ದಯಾನಂದ ದೊಡ್ಮನಿ, ಭೀಮರಾಯ ಗೌರ, ಮಹಾಂತೇಶ ಬಳೂಂಡಗಿ, ಮಹಾನಿಂಗ ಅಂಗಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment